ನ್ಯೂಸ್

‘ಲವ್ ಜಿಹಾದ್’ ಪುಸ್ತಕ ಬಿಡುಗಡೆ

ಶ್ರೀರಾಮ ಸೇನೆ ಹೊರ ತಂದಿರುವ ಮತಾಂಧ ವಿಷಜಂತುಗಳ ವಿಕೃತ ಪ್ರೇಮಜಾಲ ಎಂಬ ಟ್ಯಾಗ್ ಲೈನ್‌ವುಳ್ಳ ‘ಲವ್ ಜಿಹಾದ್’ ಪುಸ್ತಕವನ್ನು ಶನಿವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸಂಘಟನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಡುಗಡೆ ಮಾಡಿದರು.

ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಅವರ ಮೇಲೆ ದೌರ್ಜನ್ಯ ಹೆಚ್ಚಲು ಸರ್ಕಾರ, ಪೊಲೀಸ್ ಇಲಾಖೆ ಹಾಗೂ ನ್ಯಾಯಾಲಯಗಳೂ ಕಾರಣವಾಗಿವೆ. ದೆಹಲಿಯ ನಿರ್ಭಯ ಪ್ರಕರಣದ ತೀರ್ಪು ಬರಲು ಸುಮಾರು 12 ವರ್ಷ ಬೇಕಾಯಿತು. ಈ ರೀತಿ ವಿಳಂಬವಾಗುವುದರಿಂದಾಗಿಯೇ ದೌರ್ಜನ್ಯಗಳಿಗೆ ನಿಯಂತ್ರಣ ಇಲ್ಲದಂತಾಗಿದೆ. ಹೀಗಾಗಿ ನ್ಯಾಯಾಲಯಗಳು ನೊಂದವರ ಬೆಂಬಲಕ್ಕೆ ನಿಲ್ಲಬೇಕೆಂದು ಕೋರಿದರು.

ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಕಾಲೇಜು ವಿದ್ಯಾರ್ಥಿನಿಯರು, ಪಾಲಕರು, ಮಹಿಳೆಯರಲ್ಲಿ ಜಾಗೃತಿ, ಧೈರ್ಯ ಮೂಡಿಸಲೆಂದು ಈ ಪುಸ್ತಕದ ಲಕ್ಷ ಪ್ರತಿ ಮುದ್ರಿಸಿ ಎಲ್ಲೆಡೆ ವಿತರಿಸುತ್ತಿದೆ. ಜತೆಗೆ ತ್ರಿಶೂಲ ದೀಕ್ಷೆ ಸಹ ನೀಡಲಾಗುತ್ತಿದೆ. ಈ ರೀತಿಯ ನೂರು ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದು, ಈಗಾಗಲೇ 18 ಕಡೆ ನಡೆದಿದೆ ಎಂದು ಮಾಹಿತಿ ನೀಡಿದರು.

ಪ್ರಮುಖರಾದ ಭ್ರಮರಾಂಬ ಮಹೇಶ್ವರಿ, ಸುಂದರೇಶ್, ವೆಂಕಟ ನಾರಾಯಣರಾವ್ ಇದ್ದರು.