ಚಿತ್ರದುರ್ಗ: ದೇಶಾದ್ಯಂತ ಕೋಟ್ಯಂತರ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಾರೆ. ಆದರೆ, ಪ್ರಸಾದ ರೂಪದಲ್ಲಿ ನೀಡುವ ಲಡ್ಡುಗೆ ಬೇರೆ-ಬೇರೆಯ ಪ್ರಾಣಿಗಳ ಕೊಬ್ಬನ್ನು ಬೆರೆಸಿರುವುದು ಆಘಾತಕಾರಿ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲಡ್ಡು ವಿವಾದ ಕುರಿತು ಅಲ್ಲಿನ ರಾಜ್ಯ ಸರ್ಕಾರ ಸಮಗ್ರ ತನಿಖೆ ಕೈಗೊಂಡು ಕ್ರಮವಹಿಸುವ ವಿಶ್ವಾಸವಿದೆ. ತಪ್ಪು ಕಂಡುಬಂದಲ್ಲಿ ಸಂಬಂಧಿಸಿದವರಿಗೆ ಶಿಕ್ಷೆಯಾಗಲಿ ಎಂದರು.
ಕರ್ನಾಟಕದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಕೂಡಿರುವ ಕಾಂಗ್ರೆಸ್‌ನಿಂದಾಗಿ ಸರ್ಕಾರದ ಆಡಳಿತ ಯಂತ್ರ ಕುಸಿದಿದೆ. ಸ್ವತಃ ಆರ್.ವಿ.ದೇಶಪಾಂಡೆ ಅವರೇ ಅನುದಾನ ಇಲ್ಲದೆ, ಕ್ಷೇತ್ರದಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲವೆಂದು ನೊಂದು ನುಡಿದಿದ್ದಾರೆ. ಹೀಗಿರುವಾಗ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ರಾಜ್ಯಪಾಲರ ಮೇಲೆ ಕೈ ನಾಯಕರು ಗೂಬೆ ಕೂರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಎಲ್ಲ ಸಮುದಾಯದ ಜನರಿಗೂ ಬಿ.ಎಸ್.ಯಡಿಯೂರಪ್ಪ ಅವರ ಕುರಿತು ಗೊತ್ತಿದೆ. ಬಸವನಗೌಡ ಪಾಟೀಲ್ ಯತ್ನಾಳ್ ಅವರಿಂದ ಕಲಿಯುವ ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.