ಲಿಂಗದಹಳ್ಳಿ: ಕೋಟೆ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ಪುನರುಜ್ಜೀವನಗೊಳಿಸಲಾಗುತ್ತಿದೆ. ಗರ್ಭಗುಡಿ, ಯಜ್ಞ ಮಂಟಪ, ಪ್ರಾಂಗಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ನೂತನ ದೇವಾಲಯ ಲೋಕಾರ್ಪಣೆಗೊಳ್ಳಲಿದೆ ಎಂದು ದೇವಾಲಯ ಪುನರುಜ್ಜೀವನ ಸಮಿತಿ ಅಧ್ಯಕ್ಷ ಕೆ.ಎನ್.ಶಶಿಧರನ್ ಹೇಳಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೋಟೆ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದ್ದ ವಿಟ್ಲಪಿಂಡಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ದೇವರು ಸಾವಿರಾರು ವರ್ಷಗಳ ಹಿಂದೆ ಮಂಚೇತವರು ಗ್ರಾಮದಲ್ಲಿ ಕೋಟೆ ನಿರ್ಮಿಸಿಕೊಂಡು ಅಳ್ವಿಕೆ ನಡೆಸಿದ್ದ ಪಾಳೇಗಾರ ವಶಂಸ್ಥರ ಕುಲದೇವ. ಪಾಳೇಗಾರರ ವಂಶದ ನಂತರ ದೇವಾಲಯ ಶಿಥಿಲಗೊಂಡು ಪೂಜೆ ಪುನಸ್ಕಾರಗಳಿಲ್ಲದೆ ಅನಾಥವಾಗಿದ್ದ ಕೋಟೆ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯವನ್ನು ದಾನಿಗಳ ನೆರವಿನೊಂದಿಗೆ ಪುನಃ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದೇವಾಲಯ ಸಮಿತಿಯ ಪದಾಧಿಕಾರಿ ಶಂಕರಲಿಂಗೇಗೌಡ ಮಾತನಾಡಿ, ಪಾಳೇಗಾರರ ವಂಶಸ್ಥರು ಪ್ರತಿಷ್ಠಾಪನೆ ಮಾಡಿದ್ದ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿಯು ಸೂಕ್ಷ್ಮ ಕೆತ್ತನೆಗಳಿಂದ ಕೂಡಿರುವ ಸುಂದರ ವಿಗ್ರಹವಾಗಿದೆ. ಪೂಜೆ ಪುನಸ್ಕಾರಗಳಿಲ್ಲದ್ದನ್ನು ಮನಗಂಡು ಈ ಭಾಗದ ಭಕ್ತರೆಲ್ಲರ ಮನದಾಸೆಯಂತೆ ನೂತನ ದೇವಾಲಯದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇದನ್ನು ಐತಿಹಾಸಿಕ ಸ್ಥಳವನ್ನಾಗಿ ಮಾಡಿ ಭಕ್ತಾದಿಗಳ ಅನುಕೂಲಕ್ಕೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುವುದು ಎಂದು ಹೇಳಿದರು.
ಲೋಕಕಲ್ಯಾಣಾರ್ಥವಾಗಿ ವಿವಿಧ ಹೋಮ, ಹವನ ನಡೆಸಲಾಯಿತು. ಬಾಲಕೃಷ್ಣ ರಾಧೆಯರ ವೇಷಧರಿಸಿದ ಪುಟಾಣಿಗಳನ್ನು ಸನ್ಮಾನಿಸಲಾಯಿತು. ಮೊಸರು ಕುಡಿಕೆ ಹೊಡೆಯುವ ಸ್ಪರ್ಧೆ ನಡೆಸಿ ಗೆದ್ದರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಂದಿಬಟ್ಟಲು ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಎನ್.ಜೆ.ಭದ್ರೇಗೌಡ, ಎನ್.ಪಿ.ಕೃಷ್ಣೇಗೌಡ, ಶಂಕರಲಿಂಗೇಗೌಡ, ಬಿ.ತಿಪ್ಪೇಶಣ್ಣ, ಕೆ.ಎನ್.ಶಶಿಧರನ್, ವರ್ತೆಗುಂಡಿ ಮಂಚೇತವರು, ತಣಿಗೆಬೈಲು, ರೂಪ್‌ಲೈನ್ , ನಂದಿಬಟ್ಟಲು ಗ್ರಾಮಗಳ ನೂರಾರು ಭಕ್ತರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.