ಪಿರಿಯಾಪಟ್ಟಣ: ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸುವ ಆರೋಗ್ಯ ಉಚಿತ ತಪಾಸಣಾ ಶಿಬಿರಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವ ಅಗತ್ಯವಿದೆ ಎಂದು ಅಖಿಲ ಕರ್ನಾಟಕ ಧರ್ಮಸ್ಥಳ ಜನಜಾಗೃತಿ ವೇದಿಕೆಯ ರಾಜ್ಯ ಉಪಾಧ್ಯಕ್ಷ ಎ.ಟಿ.ರಂಗಸ್ವಾಮಿ ಅಭಿಪ್ರಾಯಪಟ್ಟರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸುಮಾರು 7ರಿಂದ 8 ಸಾವಿರ ಜನಸಂಖ್ಯೆ ಹೊಂದಿರುವ ಆಲನಹಳ್ಳಿ ತಾಲೂಕಿನ ಅತಿ ದೊಡ್ಡ ಗ್ರಾಮವಾಗಿದ್ದು, ಆರೋಗ್ಯ ಶಿಬಿರದಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಉಪಸ್ಥಿತರಿರುವುದು ಬೇಸರದ ವಿಷಯವಾಗಿದೆ ಎಂದರು. ರೋಗಗಳು ಉಲ್ಬಣಗೊಂಡಾಗ ಪರದಾಡುವ ಬದಲು ಆರಂಭಿಕ ಹಂತದಲ್ಲಿಯೇ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಪ್ರಾಣಾಪಾಯಗಳಿಂದ ಪಾರಾಗಬಹುದಾಗಿದೆ ಎಂದರು.
ತಾಲೂಕಿನಲ್ಲಿ ಬಹುತೇಕ ಜನರು ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ಚಿಕಿತ್ಸೆಗಳಿಗಾಗಿ ಮೈಸೂರು, ಮಡಿಕೇರಿ, ಹಾಸನ ಮತ್ತಿತರ ನಗರಗಳಿಗೆ ತೆರಳುತ್ತಿದ್ದಾರೆ. ತಜ್ಞ ವೈದ್ಯರಿಂದ ನಮ್ಮ ಗ್ರಾಮದಲ್ಲಿಯೇ ನಡೆಯುತ್ತಿರುವ ಆರೋಗ್ಯ ತಪಾಸಣಾ ಶಿಬಿರಗಳ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸುರೇಶ್ ಶೆಟ್ಟಿ ಮಾತನಾಡಿ, ಕಳೆದ 40 ವರ್ಷಗಳಿಂದ ಸಂಸ್ಥೆ ವತಿಯಿಂದ ರಾಜ್ಯದಾದ್ಯಂತ ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜನಪರ ಚಟುವಟಿಕೆಯನ್ನು ಆಯೋಜಿಸಲಾಗುತ್ತಿದೆ. ರಾಜ್ಯದಲ್ಲಿ 54 ಲಕ್ಷಕ್ಕೂ ಹೆಚ್ಚು ಜನರು ನಮ್ಮ ಸಂಸ್ಥೆಯ ಹಲವು ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದರು.
5 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು ಜ್ಞಾನವಿಕಾಸ, ಆರೋಗ್ಯ, ಕಾನೂನು ಸಲಹೆ, ಪೌಷ್ಟಿಕ ಆಹಾರ ಸೇವನೆ, ಮದ್ಯವರ್ಜನ ಶಿಬಿರ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳು ಚಾಲ್ತಿಯಲ್ಲಿವೆ ಎಂದರು.
ನಂದಿನಾಥಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರೇಮನಾಥ್, ಹುಣಸವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್, ನಂದಿನಾಥಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಾಗಣ್ಣ , ದ್ಯಾವಪ್ಪನಾಯಕ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ, ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಎಂ.ಕೆ.ಪ್ರಕಾಶ್, ವೀರೇಶ್, ರೂಪಾ, ಅನುಷಾರಾಣಿ , ರಾಕೇಶ್, ಜ್ಯೋತಿ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷೆ ಜಯಂತಿ, ಆರೋಗ್ಯ ಸಂರಕ್ಷಣ ಅಧಿಕಾರಿ ಶಾಂತಕುಮಾರಿ, ಮೇಲ್ವಿಚಾರಕರಾದ ಪ್ರೇಮಾ, ಪೂಜಾ, ಹೇಮಲತಾ, ನಜ್ಮಾ, ನೇತ್ರಾವತಿ, ಗಾಯತ್ರಿ, ಕಮಲಮ್ಮ, ಮಂಜುಳಾ, ರೇವತಿ, ಗಾಯತ್ರಿ, ಮಮತಾ, ನಿರ್ಮಲಾ, ಶಿಲ್ಪಾ ಸೇರಿದಂತೆ ಆಶಾ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.