ನ್ಯೂಸ್

ರೈಲ್ವೇ ಕೋಚ್ ಫ್ಯಾಕ್ಟರಿ ನಿರ್ಮಾಣ ಮತ್ತೆ ಮುನ್ನೆಲೆಗೆ / ಶ್ರೀನಿವಾಸಪುರ ತಾಲ್ಲೂಕು ಎದರೂರು ಬಳಿ ಜಾಗ ಗುರುತು / ಸಚಿವ ಕೆ.ಹೆಚ್.ಮುನಿಯಪ್ಪನವರ ಬಹುದಿನಗಳ ಕನಸಿನ ನನಸಿಗಾಗಿ ಹೋರಾಟಕ್ಕೆ ಮುಂದು

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಎದರೂರು ಬಳಿಯ ಉದ್ದೇಶಿತ ರೈಲ್ವೇಕೋಚ್ ಫ್ಯಾಕ್ಟರಿ ನಿರ್ಮಾಣ ಮತ್ತೆ ಮುನ್ನೆಲೆಗೆ ಬಂದಿದ್ದು, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ನವರ ಕನಸಿನ ಕೂಸಾಗಿರುವ ರೈಲ್ವೇಕೋಚ್ ಫ್ಯಾಕ್ಟರಿ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಬೇಕೆAದು ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ನವರ ಬಳಿ ಒತ್ತಡ ತರುತ್ತಿದ್ದಾರೆ.

ಕೆ.ಹೆಚ್.ಮುನಿಯಪ್ಪ ನವರು ಕೇಂದ್ರ ರೈಲ್ವೇ ಖಾತೆಯ ಸಚಿವರಾಗಿದ್ದ ಸಂದರ್ಭದಲ್ಲಿ ಆಗಿನ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ರೈಲ್ವೇಕೋಚ್ ಫ್ಯಾಕ್ಟರಿ ನಿರ್ಮಾಣ ಮಾಡಬೇಕೆಂದು ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದಿದ್ದರು.

ಅದಕ್ಕಾಗಿ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಎದರೂರು ಬಳಿ ಜಾಗವನ್ನು ಗುರ್ತಿಸಲಾಗಿದ್ದು, ೫೦೦ ಎಕರೆ ಸರ್ಕಾರದ ಜಮೀನು ಸೇರಿದಂತೆ ಖಾಸಗಿ ಜಮೀನು ಸೇರಿ ೧೦೦೦ ಎಕರೆಯಷ್ಟು ಜಮೀನನ್ನು ರೈಲ್ವೇ ಇಲಾಖೆಯವರು ಗುರ್ತಿಸಿದ್ದರು. ಸದರಿ ಜಮೀನಿನ ಗಡಿ ಗುರ್ತಿಸಿ ರೈಲ್ವೇ ಗ್ರೀನ್‌ಪ್ಲಾಂಟ್ ಎಂದು ರೈಲ್ವೇ ಇಲಾಖೆಯ ದಾಖಲೆಗಳಲ್ಲಿ ಸೇರ್ಪಡೆ ಮಾಡಿದ್ದರು.

೨೦೧೪ರಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತಿ ಜಾರಿಯಾದ ದಿನದಂದು ರೈಲ್ವೇಕೋಚ್ ಫ್ಯಾಕ್ಟರಿ ನಿರ್ಮಾಣ ಗುದ್ದಲಿ ಪೂಜೆಯನ್ನು ಆಗ ನೆರವೇರಿಸಿದರು. ತರಾತುರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯಲ್ಲಿ ಚುನಾವಣೆ ನೀತಿ ಸಂಹಿತಿ ಜಾರಿಯಾದ ಹಿನ್ನಲೆಯಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯ ಸೇರಿದಂತೆ ಎಲ್ಲಾ ಗಣ್ಯರು ವೇದಿಕೆ ಇಳಿದು ಪರಾರಿಯಾದರು.

ನಂತರ ಕೇಂದ್ರದಲ್ಲಿ ಸರ್ಕಾರ ಬದಲಾವಣೆಯಾಯಿತು. ಕೆ.ಹೆಚ್.ಮುನಿಯಪ್ಪ ಸಂಸದರಾಗಿ ಕೋಲಾರ ಜಿಲ್ಲೆಯಿಂದ ಆಯ್ಕೆ ಆದರು. ಸರ್ಕಾರ ಬದಲಾವಣೆಯಾದ ನಂತರ ರೈಲ್ವೇಕೋಚ್ ಫ್ಯಾಕ್ಟರಿ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿತು. ೨೦೧೯ರಲ್ಲಿ ಜಿಲ್ಲೆಯಿಂದ ಬಿಜೆಪಿಯಿಂದ ಸಂಸದ ಮುನಿಸ್ವಾಮಿ ಆಯ್ಕೆ ಆದರು. ರೈಲ್ವೇಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ಒತ್ತು ನೀಡಲಿಲ್ಲ.

ರೈಲ್ವೇಕೋಚ್ ಫ್ಯಾಕ್ಟರಿ ನಿರ್ಮಾಣಕ್ಕಾಗಿ ಗುರ್ತಿಸಿರುವ ಜಮೀನು ಶ್ರೀನಿವಾಸಪುರ ತಾಲ್ಲೂಕು, ಕೋಲಾರ ತಾಲ್ಲೂಕು ಮತ್ತು ಮುಳಬಾಗಿಲು ತಾಲ್ಲೂಕುಗಳಿಗೂ ಸೇರ್ಪಡೆಯಾಗಲಿದ್ದು, ೩ ತಾಲ್ಲೂಕುಗಳ ಜನರಿಗೂ ರೈಲ್ವೇಕೋಚ್ ಫ್ಯಾಕ್ಟರಿ ನಿರ್ಮಣ ಕಾಮಗಾರಿಯಿಂದ ಅನುಕೂಲವಾಗುತ್ತಿತ್ತು.

ಈಗ ನಮ್ಮ ರಾಜ್ಯದವರೇ ಕೇಂದ್ರಸರ್ಕಾರದಲ್ಲಿ ರೈಲ್ವೇ ಖಾತೆಯ ರಾಜ್ಯ ಸಚಿವರಾಗಿರುವ ಕಾರಣ ಸಚಿವ ಕೆ.ಹೆಚ್.ಮುನಿಯಪ್ಪ ನವರು ರೈಲ್ವೇಕೋಚ್ ಕಾಮಗಾರಿಗೆ ಚಾಲನೆ ನೀಡುವಂತೆ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ನವರ ಮೇಲೆ ಒತ್ತಡ ತಂದು ಇದು ನನ್ನ ಕನಸಿನ ಕೂಸು, ನಾನು ರೈಲ್ವೇ ಖಾತೆ ಸಚಿವರಾಗಿದ್ದ ಸಂದರ್ಭದಲ್ಲಿ ಮಂಜೂರಾತಿ ಪಡೆದಿದ್ದೇನೆ. ಈ ಕಾಮಗಾರಿಗಳಿಗೆ ಚಾಲನೆ ನೀಡಿದರೆ ದಕ್ಷಿಣ ಭಾರತದಲ್ಲಿ ಒಂದು ರೈಲ್ವೇ ಕೋಚ್ ಫ್ಯಾಕ್ಟರಿ ನಿರ್ಮಾಣ ಆದಂತೆ ಆಗುತ್ತದೆ. ಇದರಿಂದ ಸಾವಿರಾರು ಜನಕ್ಕೆ ಉದ್ಯೋಗ ಸಿಗುತ್ತದೆ. ಮತ್ತು ಕೋಲಾರ ಜಿಲ್ಲೆಯಲ್ಲಿಯ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವಂತೆ ಆಗುತ್ತದೆ ಎಂದು ಮನವಿ ಸಲ್ಲಿಸಿದ್ದಾರೆ.

ಸಚಿವ ಕೆ.ಹೆಚ್.ಮುನಿಯಪ್ಪ ಈ ಜಿಲ್ಲೆಯಿಂದ ೭ ಬಾರಿ ಸಂಸದರಾಗಿ ಆಯ್ಕೆ ಆಗಿದ್ದು, ಈ ಜಿಲ್ಲೆಯ ಜನರ ಋಣ ತೀರಿಸಲು ಕೋಲಾರ ಜಿಲ್ಲೆಯಲ್ಲಿ ರೈಲ್ವೇಕೋಚ್ ಫ್ಯಾಕ್ಟರಿ ಪ್ರಾರಂಭಿಸಲೇಬೇಕೆAಬುದು ಅವರ ಆಸೆಯಾಗಿದೆ. ಆದರೆ ೨೦೧೯ರ ೮ ನೇ ಚುನಾವಣೆಯಲ್ಲಿ ಪರಾಭವಗೊಂಡಿAದ್ದ ಕಾರಣ ಮತ್ತಷ್ಟು ಹಿನ್ನಡೆಯಾಯಿತು.

ಈಗ ಶತಾಯಗತಾಯವಾಗಿ ಜಿಲ್ಲೆಯಲ್ಲಿ ತಮ್ಮ ಹೆಸರನ್ನು ಉಳಿಸಿಕೊಳ್ಳಲು ರೈಲ್ವೇಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ರೈಲ್ವೇ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ಗುರ್ತಿಸಿರುವ ಜಮೀನಿಗೆ ನೀಲಿ ನಕ್ಷೆಯು ತಯಾರಾಗಿದ್ದು, ರೈಲ್ವೇ ಇಲಾಖೆಯ ಕಡತದಲ್ಲಿ ಸದರಿ ಜಮೀನು ಇಲಾಖೆಯ ಗ್ರೀನ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದರಿAದ ಜೀವ ಇದ್ದಂತೆ ಆಗಿರುವುದರಿಂದ ಜಮೀನಿನ ಅವಶ್ಯಕತೆ ಇಲ್ಲದಂತೆ ಆಗಿದ್ದು, ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ರೈಲ್ವೇ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ಯಾವುದೇ ಅಡೆತಡೆಗಳು ಇಲ್ಲದಂತೆ ಆಗಿದೆ.

ಚಿತ್ರ ೦೯ ಕೆ.ಎಲ್.ಆರ್. ೦೩ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಎದರೂರು ಬಳಿ ಉದ್ದೇಶಿತ ರೈಲ್ವೇ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆ.ಹೆಚ್.ಮುನಿಯಪ್ಪ, ರಮೇಶ್‌ಕುಮಾರ್ ಮುಂತಾದವರು ಇರುವ ಸಂಗ್ರಹ ಚಿತ್ರ