ನ್ಯೂಸ್

ರೈಲು ನಿಲ್ದಾಣ ವಿಸ್ತರಣೆ ಕಾಮಗಾರಿ ಪರಿಶೀಲನೆ

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೋಮವಾರ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ನಿಲ್ದಾಣ ವಿಸ್ತರಣೆ ಕಾಮಗಾರಿಗಳನ್ನು ಪರಿಶೀಲಿಸಿದರು. ಜತೆಗೆ ಕಾಮಗಾರಿ ಸಂಬಂಧ ಅಗತ್ಯ ಮಾಹಿತಿ ಪಡೆದರು. ಜತೆಗೆ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಸೀಕೆರೆ-ಹಾಸನ-ಮೈಸೂರು ಜೋಡಿ ಹಳಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಅದೇ ರೀತಿ ಮೈಸೂರು-ಚಾಮರಾಜನಗರ ನಡುವೆ ಜೋಡಿ ಹಳಿ ಹಾಕುವ ಕಾಮಗಾರಿ ನಡೆಯುತ್ತಿದೆ. ನಂಜನಗೂಡು-ಚಾಮರಾಜನಗರ ನಡುವೆ ಮತ್ತೊಂದು ಕ್ರಾಸಿಂಗ್ ಸ್ಟೇಷನ್ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ. ನಾಗನಹಳ್ಳಿಯಲ್ಲಿ ಮತ್ತೊಂದು ರೈಲ್ವೆ ಟರ್ಮಿನಲ್ ನಿರ್ಮಿಸಲು ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಶ್ರವಣಬೆಳಗೊಳ-ಕೊಡಗು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಕೈಗೊಳ್ಳಲು ಒಪ್ಪಿಕೊಂಡಿದೆ. ಬೆಳಗೊಳ-ಕುಶಾಲನಗರ ರೈಲ್ವೆ ಮಾರ್ಗ ಯೋಜನೆ ಅನುಷ್ಠಾನಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಕೈ ಜೋಡಿಸಿಲ್ಲ. ಕೃಷಿ, ಕೈಗಾರಿಕೆಗಳ ಬೆಳವಣಿಗೆ ದೃಷ್ಟಿಯಿಂದ ಕೊಡಗಿಗೆ ರೈಲ್ವೆ ಸಂಪರ್ಕ ಒದಗಿಸುವುದು ಮುಖ್ಯವಾಗಿದೆ. ಹಾಗಾಗಿ, ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆ ಮಾಡಿಕೊಡಬೇಕು. ಜಾಗ ದೊರೆತ ಕೂಡಲೇ ಇನ್ನಿತರ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಅಶೋಕಪುರಂಗೆ 4 ಲಿಫ್ಟ್: ಅಶೋಕಪುರಂ ನಿಲ್ದಾಣಕ್ಕೆ ಇದೀಗ 4 ಲಿಫ್ಟ್‌ಗಳು ಮಂಜೂರಾಗಿವೆ. ಕೋಚ್ ಗೈಡೆನ್ಸ್ ಡಿಸ್‌ಪ್ಲೆ ಬೋರ್ಡ್ ಸಿಸ್ಟಂ ಅಳವಡಿಸಲಾಗುತ್ತಿದೆ. ಇದಲ್ಲದೆ 2 ಕೋಟಿ ರೂ. ವೆಚ್ಚದಲ್ಲಿ ಮತ್ತೊಂದು ಯೋಜನೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಜನರ ಕೋರಿಕೆಯಂತೆ ಮಾಲ್ಗುಡಿ ಎಕ್ಸ್‌ಪ್ರೆಸ್ ವೇಳೆಯನ್ನು 8.50ಕ್ಕೆ ಬದಲಾಗಿದೆ 8.35ಕ್ಕೆ ಬದಲಿಸಲಾಗಿದೆ. ಚಾ.ನಗರ-ತಿರುಪತಿ ಎಕ್ಸ್‌ಪ್ರೆಸ್ ಅಶೋಕಪುರಂನಲ್ಲಿ ನಿಲ್ಲಿಸುವ ಬೇಡಿಕೆಯನ್ನು ಪರಿಗಣಿಸಲಾಗುತ್ತಿದೆ. ಇದಲ್ಲದೆ ದಸರೆ, ದೀಪಾವಳಿ ಸಂದರ್ಭ ವಿಶೇಷ ರೈಲುಗಾಡಿ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.

ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮದಿದ್ ಮಿತ್ತಲ್, ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.