ನ್ಯೂಸ್

ರೈತಸಂಘದ ಸದಸ್ಯರಿಂದ ಪ್ರತಿಭಟನೆ

ಹುಣಸೂರು: ತಾಲೂಕಿನ ಮರೂರು ಕಾವಲ್ ಪಿಕ್‌ಅಪ್ ನಾಲೆಯ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತಸಂಘ ಮತ್ತು ಹಸಿರುಸೇನೆಯ ತಾಲೂಕು ಘಟಕದ ಸದಸ್ಯರು ಕಾವೇರಿ ನೀರಾವರಿ ನಿಗಮದ ಹಾರಂಗಿ ಹುಣಸೂರು ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.


ಗುರುವಾರ ರೈತಸಂಘದ ಸದಸ್ಯರ ಕಚೇರಿ ಮುಂಭಾಗ ಜಮಾವಣೆಗೊಂಡು ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ದಶಕಗಳಿಂದ ಮರೂರು ಕಾವಲ್ ಪಿಕ್‌ಅಪ್ ನಾಲೆಯ ಲೈನಿಂಗ್ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದೇವೆ. ಪ್ರತಿಭಟನೆ, ಹೋರಾಟಗಳನ್ನು ನಡೆಸಿ ಆಡಳಿತದ ಗಮನ ಸೆಳೆದಿದ್ದೇವೆ. ಹೀಗಿದ್ದರೂ ಇಂದಿನವರೆಗೂ ಕಾಮಗಾರಿ ಕೈಗೊಂಡಿಲ್ಲ. ಲೈನಿಂಗ್ ಕಾಮಗಾರಿ ಕೈಗೊಂಡಲ್ಲಿ ತಾಲೂಕಿನ ಉಂಡವಾಡಿ, ಹೆಜ್ಜೂರು, ಮಾರಗೌಡನಹಳ್ಳಿ ವ್ಯಾಪ್ತಿಯ ಕೊನೆಯ ಜಮೀನುಗಳಿಗೂ ನೀರು ದೊರಕಲಿದೆ. ಲಕ್ಷ್ಮಣತೀರ್ಥ ಅಚ್ಚುಕಟ್ಟು ಪ್ರದೇಶದ ಉದ್ದೂರು ಮತ್ತು ಹನುಮಂತಪುರ ನಾಲೆಯ ಕಾಂಕ್ರೀಟ್ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿರುವ ಕಾರಣ ಹಾಳಾಗಿದೆ. ಅಲ್ಲದೆ ಚಾನಲ್ ರಸ್ತೆಯು ಹದಗೆಟ್ಟಿದೆ ಎಂದು ದೂರಿದರು.

ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡ ಪೂರ್ಣಯ್ಯ ನಾಲೆ ತಾಲೂಕಿನ ಬಿಳಿಕೆರೆ ಹೋಬಳಿಗೆ ವರದಾನವಾಗಿತ್ತು. ಆದರೆ ಆ ಭಾಗದ ರೈತರಿಗೆ ಅನುಕೂಲವಾಗುವ ಈ ನಾಲೆಯ ದುರಸ್ತಿ ಮತ್ತು ನಾಲೆಗೆ ನೀರು ಹರಿಸುವ ಉಪಕ್ರಮಗಳನ್ನು ಕೈಗೊಳ್ಳದೆ ಇರುವ ಕಾರಣ ದಶಕಗಳಿಂದ ಬಿಳಿಕೆರೆ ಹೋಬಳಿ ವ್ಯಾಪ್ತಿಯ ರೈತರು ತೊಂದರೆಗೊಳಗಾಗಿದ್ದಾರೆ. ಹೊಸಪುರ ಕೆರೆಯಿಂದ ಹಳೇಪುರ, ಬೆಂಕಿಪುರ, ಚಲ್ಲಹಳ್ಳಿ, ಗೋಹಳ್ಳಿ, ಅನ್ನರಾಯನಪುರ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಈ ನಾಲೆಯ ಮೂಲಕ ಕೈಗೊಂಡಲ್ಲಿ ಈ ಭಾಗದ ರೈತರ ಬಾಳು ಬೆಳಗುತ್ತದೆ. ಇಲಾಖೆ ಅಧಿಕಾರಿಗಳು ಈ ಕೂಡಲೇ ಇಂತಹ ಸಮಸ್ಯೆಗಳ ಕುರಿತು ಗಮನಹರಿಸಬೇಕು. ನೂತನವಾಗಿ ಆಯ್ಕೆಯಾದ ಶಾಸಕ ಜಿ.ಡಿ.ಹರೀಶ್‌ಗೌಡರಿಗೂ ಈ ಕುರಿತು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.


ಮಾಹಿತಿ ನೀಡುತ್ತೇವೆ: ಹಾರಂಗಿ ವಿಭಾಗದ ಇಇ ಸುರೇಶ್ ಮಾತನಾಡಿ, ರೈತರು ಮಂಡಿಸಿರುವ ಬೇಡಿಕೆಗಳನ್ನು ಪರಿಶೀಲಿಸಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದರು. ಇದೇ ವೇಳೆ ರೈತರಿಂದ ಉಪತಹಸೀಲ್ದಾರ್ ಶಕೀಲಾ ಬಾನು ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಮುಖಂಡರಾದ ನಿಲುವಾಗಿಲು ಪ್ರಭಾಕರ್, ಧನಂಜಯ, ಹರಳಹಳ್ಳಿ ಬಸವರಾಜು, ಮೋದೂರು ಶಿವಣ್ಣ, ಉಂಡುವಾಡಿ ಚಂದ್ರೇಗೌಡ, ಮಹದೇವ್, ಅಗ್ರಹಾರ ಸತೀಶ್ ಇತರರು ಇದ್ದರು.