ನ್ಯೂಸ್

ರೈತರು ರಾಗಿ ಬೆಳೆ ಹೆಚ್ಚಿಸಲಿ

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಹರಕನಹಳ್ಳಿ ಗ್ರಾಮದಲ್ಲಿ 2024-25 ನೇ ಸಾಲಿನ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ರಾಗಿ ಸಾಲು ಬಿತ್ತನೆ ತರಬೇತಿ ಹಾಗೂ ಕ್ಷೇತ್ರೋತ್ಸವವನ್ನು ಶುಕ್ರವಾರ ಆಯೋಜಿಸಲಾಗಿತ್ತು.

ಕೃಷಿ ಅಧಿಕಾರಿ ಎಸ್.ದಯಾನಂದಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಗಿ ಉತ್ಪಾದನೆ ಕಡಿಮೆಯಾಗುತ್ತಿದ್ದು, ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಯೋಜನೆಯಡಿ ಉಚಿತವಾಗಿ ದೊರೆಯುವ ಕೃಷಿ ಬಳಕೆಯ ಜಿಂಕ್ ಸಲ್ಫೇಟ್, ಬೋರಾಕ್ಸ್, ಲಘು ಪೋಷಕಾಂಶಗಳ ಮಿಶ್ರಣ, ಎರೆಹುಳು ಗೊಬ್ಬರ, ಕೀಟನಾಶಕಗಳು ಹಾಗೂ ಮುಂತಾದ ಕೃಷಿ ಪರಿಕರಗಳನ್ನು ಬಳಸಿಕೊಂಡು ನೂತನ ತಾಂತ್ರಿಕತೆಯನ್ನು ಅಳವಡಿಸಿ ರಾಗಿ ಉತ್ಪಾದಕತೆಯನ್ನು ಹೆಚ್ಚಿಸಿ, ರೈತರ ಆರ್ಥಿತೆಯನ್ನು ಉತ್ತಮ ಪಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.

ಕೃಷಿ ಇಲಾಖೆಯ ಯೋಜನೆಗಳಾದ ಬಿತ್ತನೆ ಬೀಜ ಪೂರೈಕೆ ಯೋಜನೆ, ಕೃಷಿ ಯಾಂತ್ರಿಕರಣ ಯೋಜನೆ, ಸೂಕ್ಷ್ಮ ನೀರಾವರಿ ಯೋಜನೆ, ಸೆಕೆಂಡರಿ ಕೃಷಿ, ಕೃಷಿ ನವೋದ್ಯಮ, ಸಸ್ಯ ಸಂರಕ್ಷಣಾ ಯೋಜನೆ, ಕೃಷಿ ಭಾಗ್ಯ ಯೋಜನೆ ಹಾಗೂ ಮುಂತಾದ ಇಲಾಖೆ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ರೈತರಿಗೆ ಮಾಹಿತಿ ನೀಡಿ, ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕೋರಿದರು.

ಪ್ರಗತಿಪರ ರೈತ ಕೆ.ಟಿ.ಸತೀಶ್ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ರೈತರ ಆರ್ಥಿಕತೆಯನ್ನು ಹೆಚ್ಚಿಸುವ ಬಗ್ಗೆ ಮಾಹಿತಿ ನೀಡಿದರು. ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಕೆ.ಎಸ್.ವಿಜಯ್ ಕುಮಾರ್, ಮಲ್ಲನಕುಪ್ಪೆ ಗ್ರಾಪಂ ಸದಸ್ಯ ಗಂಗರಾಜು, ರೈತ ಮುಖಂಡರಾದ ಪುಟ್ಟೇಗೌಡ, ಜಗದೀಶ್, ಕೆಂಪರಾಜು ಇತರರು ಇದ್ದರು.