ನ್ಯೂಸ್

ರೈತರಿಗೆ ವಿತರಿಸಲು ತಂದಿದ್ದ ಪೈಪ್‌ಗಳು ವಾಪಸ್

ತಿ.ನರಸೀಪುರ: ತಾಲೂಕಿನ ಮೂಗೂರು ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ವಿತರಿಸಲು ತರಲಾಗಿದ್ದ ಸಿಂಕ್ಲರ್ ಪೈಪ್‌ಗಳು ಗುಣಮಟ್ಟವಿಲ್ಲದ ಕಾರಣ ಪೈಪ್ ಸರಬರಾಜು ಮಾಡಿದ್ದ ಕಂಪನಿಗೆ ವಾಪಸ್ ಕಳುಹಿಸಲಾಯಿತು.


ರೈತರಿಗೆ ವಿತರಿಸಲು ರೈತ ಸಂಪರ್ಕ ಕೇಂದ್ರಕ್ಕೆ ಶುಕ್ರವಾರ ಲಾರಿಯಲ್ಲಿ ಸಿಂಕ್ಲರ್ ಪೈಪ್‌ಗಳನ್ನು ತರಿಸಲಾಗಿತ್ತು. ರೈತ ಸಂಘದ ಪದಾಧಿಕಾರಿಗಳು ಭೇಟಿ ಕೊಟ್ಟು ಪರಿಶೀಲಿಸಿದಾಗ ಪೈಪ್‌ಗಳು ಕಳಪೆಯಾಗಿರುವುದನ್ನು ಕಂಡು ಕೃಷಿ ಅಧಿಕಾರಿಗಳ ಗಮನಕ್ಕೆ ತಂದರು. ಕಳಪೆ ಪೈಪ್‌ಗಳನ್ನು ಯಾವುದೇ ಕಾರಣಕ್ಕೂ ರೈತರಿಗೆ ವಿತರಣೆ ಮಾಡಬಾರದೆಂದು ತಿಳಿಸಿದರು. ಬಳಿಕ ಪೈಪ್ ಸರಬರಾಜು ಮಾಡಿದ್ದ ಕಂಪನಿಗೆ ವಾಪಸ್ ಕಳುಹಿಸಲಾಯಿತು.


ರೈತರಿಗೆ ಕಳಪೆ ಪೈಪ್‌ಗಳನ್ನು ವಿತರಿಸುವುದು ಕಂಡು ಬಂದಲ್ಲಿ ಸಂಬಂಧಿಸಿದ ಇಲಾಖೆಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಸಂಘಟನೆ ವತಿಯಿಂದ ಕೃಷಿ ಇಲಾಖೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಸಿದರು.


ಸಂಘದ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಜಿಲ್ಲಾಧ್ಯಕ್ಷ ಸೋಮಶೇಖರ್, ಜಿಲ್ಲಾ ಕಾರ್ಯದರ್ಶಿ ಕಿರಗಸೂರು ಶಂಕರ್, ಬಿ.ಪರಶಿವಮೂರ್ತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕಿರಗಸೂರು ಪ್ರಸಾದ್ ನಾಯಕ್, ಟೌನ್ ಅಧ್ಯಕ್ಷ ಅಪ್ಪಣ್ಣ, ಹ್ಯಾಕನೂರು ರಾಜೇಶ್, ಅನಿಲ್ , ಗೌರಿಶಂಕರ್ ಮತ್ತಿತರರಿದ್ದರು.