ತುಮಕೂರು ತಾಪಂ ಸಭಾಂಗಣದಲ್ಲಿ ಶಾಸಕ ಡಿ.ಸಿ.ಗೌರಿಶಂಕರ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಬಿ.ರಘು, ಜೈಪಾಲ್ ಮತ್ತಿತರರು ಇದ್ದರು. 
ನ್ಯೂಸ್

ರೈತರನ್ನು ಅವಮಾನಿಸಿದರೆ ಸಹಿಸಲ್ಲ: ಅಧಿಕಾರಿಗಳಿಗೆ ಶಾಸಕ ಡಿ.ಸಿ.ಗೌರಿಶಂಕರ್ ಎಚ್ಚರಿಕೆ

ತುಮಕೂರು: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವ ದೂರುಗಳು ಕೇಳಿಬರುತ್ತಿವೆ, ಕಷ್ಟ ಹೇಳಿಕೊಂಡು ಕಚೇರಿಗೆ ಬರುವ ರೈತರನ್ನು ಅವಮಾನಿಸಿದರೆ ಸಹಿಸುವುದಿಲ್ಲ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಹರಿಹಾಯ್ದರು.

ತಾಪಂ ಸಭಾಂಗಣದಲ್ಲಿ ಬುಧವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಕಂದಾಯ, ವಿದ್ಯುತ್, ಕೃಷಿ, ತೋಟಗಾರಿಕೆ ಸೇರಿ ಜನರೊಂದಿಗೆ ಇರುವ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಸರಿಪಡಿಸಿಕೊಳ್ಳಬೇಕು ಎಂದರು.

ಬೇಸಿಗೆಗೂ ಮುನ್ನವೇ ತಾಲೂಕಿನಲ್ಲಿ ರೈತರ ಪಂಪ್‌ಸೆಟ್‌ಗೆ ಸರಿಯಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ, ಶುದ್ಧ ನೀರಿನ ಘಟಕ, ಗಂಗಾಕಲ್ಯಾಣ ಯೋಜನೆಯ ಕೊಳವೆಬಾವಿಗಳಿಗೂ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ಹರಿಹಾಯ್ದರು.

ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ರೈತರ ಮೇಲೆ ವಿಜಿಲೆನ್ಸ್ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ, ಮನೆ ಕಟ್ಟುವಾಗಲೋ, ಪುಂಪು ಮೋಟಾರು ಬಿಡುವಾಗಲೋ ವಿದ್ಯುತ್ ಸಂಪರ್ಕ ಪಡೆದುಕೊಂಡವರ ಮೇಲೆ ಲಕ್ಷಾಂತರ ರೂ. ದಂಡ ವಿಧಿಸಿದರೆ ಹೇಗೆ? ಎಂದರು.

ಬೆಳೆ ನಷ್ಟ ಸಮೀಕ್ಷೆ ಸರಿಯಾಗಿ ಮಾಡಲಿಲ್ಲ, ರಾಗಿ ಖರೀದಿ ನಿಲ್ಲಿಸಲಾಗಿದೆ, ಬಿಪಿಎಲ್ ಕಾರ್ಡ್‌ಗಳೆಲ್ಲಾ ಎಪಿಎಲ್ ಮಾಡಲಾಗಿದೆ, ಯಾವ ರೀತಿ ಸರ್ವೇ ಮಾಡಿದೀರಿ? ನಿಗರ್ತಿಕರಿಗೂ ಎಪಿಎಲ್ ಕಾರ್ಡ್ ಪರಿವರ್ತನೆ ಮಾಡಲಾಗಿದೆ? ರಾಗಿ ಖರೀದಿ ಕೇಂದ್ರ ನಿಲ್ಲಿಸಲು ಕಾರಣವೇನು ಎಂದು ಕೃಷಿ ಮತ್ತು ಆಹಾರ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಸಭೆಯಲ್ಲಿ ತಾಪಂಆಡಳಿತಾಧಿಕಾರಿ ಬಿ.ರಘು, ಕಾರ್ಯನಿರ್ವಾಹಕ ಅಧಿಕಾರಿ ಜೈಪಾಲ್, ತಾಲೂಕು ಮಟ್ಟದ ಅಧಿಕಾರಿಗಳಾದ ಶಿವಣ್ಣ, ಕವಿತಾ, ಭಾನುಮತಿ ಮತ್ತಿತರರು ಇದ್ದರು.

ರೈತರಿಗೆ ಅರಣ್ಯ ಇಲಾಖೆ ಕಿರಕ್‌ಗೆ ಗರಂ: ಡೀಮ್ಡ್ ಅರಣ್ಯದ ಹೆಸರಿನಲ್ಲಿ ರೈತರಿಗೆ ತೊಂದರೆ ನೀಡುತ್ತಿರುವ ಅರಣ್ಯ ಇಲಾಖೆ ವಿರುದ್ಧ ಶಾಸಕ ಡಿ.ಸಿ.ಗೌರಿಶಂಕರ್ ಸಭೆಯಲ್ಲಿಯೇ ಬೇಸರ ಹೊರಹಾಕಿದರು. ಸೌದೆ ತರಲು ಹೋದರೂ ಬಂಧಿಸಿ ಕೇಸ್ ಹಾಕುವುದು, ಕೃಷಿ ಭೂಮಿಯನ್ನೇ ಅರಣ್ಯ ಭೂಮಿ ಎಂದು ಕಿರುಕುಳ ನೀಡುವುದು ಸರಿಯಲ್ಲ, ಸರ್ಕಾರದ ಇಲಾಖೆಗಳ ಬಗ್ಗೆ ಜನರಿಗೆ ಗೌರವ ಬರುವಂತೆ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದು ಸಭೆಯಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿ ಕವಿತಾ ಅವರಿಗೆ ಸೂಚಿಸಿದರು. ರೈತರಿಂದ ದೂರುಗಳು ಮುಂದುವರಿದರೆ ಅರಣ್ಯ ಇಲಾಖೆ ಕಚೇರಿಯ ಮುಂದೆಯೇ ಪ್ರತಿಭಟನೆ ನಡೆಸುತ್ತೇನೆ ಎಂದು ಎಚ್ಚರಿಸಿದರು.

ಪ್ರತಿ ಹಳ್ಳಿಯಲ್ಲಿಯೂ ಅಕ್ರಮ ಮದ್ಯ ಮಾರಾಟ!: ತುಮಕೂರು ಗ್ರಾಮಾಂತರ ಕ್ಷೇತ್ರದ ಎಲ್ಲ ಹಳ್ಳಿಗಳಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದರೂ ಅಬಕಾರಿ, ಪೊಲೀಸ್ ಇಲಾಖೆ ಕಣ್ಮುಚಿ ಕುಳಿತಿದೆ ಎಂದು ಗೌರಿಶಂಕರ್ ಹರಿಹಾಯ್ದರು. ಕೂಲಿ ಮಾಡಿದ ಹಣವೆಲ್ಲಾ ಮದ್ಯ ಸೇವನೆಗೆ ಹೋಗುತ್ತಿದೆ ಎಂದು ಬಡಕುಟುಂಬಗಳು ಗೋಳಾಡುತ್ತಿವೆ. ಅಬಕಾರಿ, ಪೊಲೀಸರು ಶಾಮೀಲಾಗಿ ಮದ್ಯ ಮಾರಾಟ ಮಾಡಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಗ್ರಾಮಗಳ ಪೆಟ್ಟಿಗೆ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿದ್ದರೂ ದಾಳಿ ನಡೆಸದಿರುವ ಮರ್ಮವೇನು ಎಂದು ಪ್ರಶ್ನಿಸಿದರು.