ನ್ಯೂಸ್

ರೈತರ ಮೇಲೆ ದಾಳಿ ಮಾಡಿದ್ದ ಚಿರತೆ ಸಾವು

ಚಾಮರಾಜನಗರ: ಇತ್ತೀಚೆಗಷ್ಟೇ ‌ತಾಲೂಕಿನ ಮೂವರ ರೈತರ ಮೇಲೆ‌ ದಾಳಿ ಮಾಡಿದ್ದ ಚಿರತೆ‌ ಸಾವನ್ನಪ್ಪಿದೆ.

ತಾಲೂಕಿನ ನಂಜೇದೇವನಪುರದ ಬಳಿಯ ಕರಿಕಲ್ಲು ಕ್ವಾರಿ ಒಳಗಡೆ ಚಿರತೆ ಮೃತಪಟ್ಟಿರುವುದನ್ನು ಬಿ.ಆರ್.ಟಿ ಚಾಮರಾಜನಗರ ವಲಯದ ಆರ್.ಎಫ್.ಒ ಅಭಿಲಾಷ್‌ ಖಚಿತ ಪಡಿಸಿದ್ದಾರೆ.

ರೈತರ ಮೇಲೆ‌ ದಾಳಿ ಮಾಡುವ ಮುನ್ನ ಮುಳ್ಳುಹಂದಿಯನ್ನು ಭೇಟೆಯಾಡಿ ಗಾಯಗೊಂಡಿದ್ದ ಚಿರತೆ ಕ್ವಾರಿಯಿಂದ ಹೊರಬಾರದೆ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.

ರೈತರ ಮೇಲೆ‌ ದಾಳಿ ಮಾಡಿತ್ತು: ಏ.3ರ ಬೆಳಗ್ಗಿನ ಜಾವ ತಾಲೂಕಿನ ವೀರನಪುರದ ರೈತರಾದ ಶಂಭುಲಿಂಗಪ್ಪ, ಗಣೇಶ್ ಮತ್ತು ಹಳೇಪುರದ ಸಿದ್ದರಾಜು ಮೇಲೆ‌ ಚಿರತೆ ದಾಳಿ ಮಾಡಿ ರೈತರ ಕತ್ತು, ಎದೆಭಾಗವನ್ನು ಗಾಯಗೊಳಿಸಿತ್ತು.‌ ಪ್ರಾಣಾಪಾಯದಿಂದ ಪಾರಾಗಿದ್ದ ರೈತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಬಿಆರ್ ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಚಾಮರಾಜನಗರ ವಲಯದ ಅರಣ್ಯ ಸಿಬ್ಬಂದಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಸಿಬ್ಬಂದಿ ಮೇಲೂ ಚಿರತೆ ಎರಗಿ ನಂಜೇದೇವನಪುರದ ಕರಿಕಲ್ಲು ಕ್ವಾರಿಯೊಳ‌ ಹೊಕ್ಕಿತ್ತು.

ಕ್ವಾರಿಯಿಂದ ಹೊರಬರಲಿಲ್ಲ ಚಿರತೆ-

ಕ್ವಾರಿಯೊಳಗೆ ಸೇರಿದ್ದ ಚಿರತೆಯನ್ನು ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೊಡಗಿದ್ದರು.

ಕ್ವಾರಿ ಒಳಹೋಗಿ ಚಿರತೆ ಸೆರೆ ಹಿಡಿಯುವುದು ಅಪಾಯವೆಂದು ಹೊರಗೆ ಬಲೆ ಬೀಸಿದ್ದರು.

ಮುಳ್ಳುಹಂದಿಯ ಭೇಟೆ‌ ವೇಳೆ ಚಿರತೆಗೆ ಮುಳ್ಳುಗಳು ಚುಚ್ಚಿದ್ದ ಕಾರಣ ನೋವು ಅನುಭವಿಸುತ್ತಿತ್ತು. ಮೊದಲ ಎರಡು ದಿನ ಚಿರತೆ ಘರ್ಜನೆ ಕ್ವಾರಿಯಿಂದ ಕೇಳಿಬರುತ್ತಿತ್ತು. ಆನಂತರ ಸದ್ದು ನಿಲ್ಲಿಸಿದ್ದ ಚಿರತೆ ಜೀವಂತವಾಗಿ ಕ್ವಾರಿಯಿಂದ ಹೊರ ಬರಲಿಲ್ಲ. ಅರಣ್ಯಾಧಿಕಾರಿಗಳು ಚಿರತೆ ಸಾವನ್ನಪ್ಪಿರಬಹುದೆಂದು ಮಂಗಳವಾರ ವ್ಯಕ್ತಪಡಿಸಿದ್ದ ಶಂಕೆ ನಿಜವಾಗಿದೆ.