ಕಡೂರು ತಾಲೂಕು ಸಾಣೇಹಳ್ಳಿ ಗ್ರಾಮದಲ್ಲಿ ಸಿಮೆಂಟ್ ರಸ್ತೆಯನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಭಂಡಾರಿ ಶ್ರೀನಿವಾಸ್, ಸಾಣೇಹಳ್ಳಿ ಆರಾಧ್ಯ, ತಮ್ಮಯ್ಯ, ಗುಜ್ಜೇನಹಳ್ಳಿ ತಿಪ್ಪೇಶ್, ನಿಂಗಪ್ಪ ಮತ್ತಿತರರಿದ್ದರು. 
ನ್ಯೂಸ್

ರೈತರ ಬದುಕು ಸುಧಾರಣೆಗೆ ಪ್ರಯತ್ನ

ಕಡೂರು: ಜಾತಿ, ಧರ್ಮದ ಸೋಂಕಿಲ್ಲದೆ ಹಿಂದುಳಿದ ವರ್ಗಗಳು ಧಾರ್ಮಿಕ ನೆಲೆಗಟ್ಟಿನ ತಳಹದಿ ಮೇಲೆ ಗ್ರಾಮದಲ್ಲಿ ಒಗ್ಗಟ್ಟು ಮೂಡಿಸುವಲ್ಲಿ ಒತ್ತು ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ತಾಲೂಕಿನ ಸಾಣೇಹಳ್ಳಿ ಗ್ರಾಮದಲ್ಲಿ ಸೋಮವಾರ ಜೀರ್ಣೋದ್ಧಾರಗೊಂಡ ಶ್ರೀ ಕರಿಯಮ್ಮ ದೇವಿ ದೇವಸ್ಥಾನದ ಕಲಶಾರೋಹಣ ಕಾರ್ಯಕ್ರಮದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ಬರಗಾಲವಿದ್ದರೂ ಧಾರ್ಮಿಕ ಕಾರ್ಯಗಳಿಗೆ ಎಂದಿಗೂ ಬರ ಕಾಡಿಲ್ಲ. ಧಾರ್ಮಿಕ ಕಾರ್ಯಗಳ ಜತೆ ಕ್ಷೇತ್ರದ ಅಭಿವೃದ್ಧಿಯೂ ಮುಖ್ಯವಾಗಿದೆ. ಶಾಶ್ವತ ನೀರಾವರಿ ಒದಗಿಸುವ ನಿಟ್ಟಿನಲ್ಲಿ ಭದ್ರಾ ಉಪಕಣಿವೆ ಯೋಜನೆ ಪ್ರಗತಿಯಲ್ಲಿದ್ದು ಪೂರ್ಣಗೊಂಡಾಗ ಕ್ಷೇತ್ರದ 176ಕ್ಕೂ ಹೆಚ್ಚು ಕೆರೆಗಳು ತುಂಬಲಿವೆ. ರೈತರ ಬದುಕು ಹಸನಾಗಬೇಕು ಎಂಬುದು ನಮ್ಮ ಮುಖ್ಯ ಗುರಿ ಎಂದರು.

ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಧಾರ್ಮಿಕ ನಂಬಿಕೆಯಲ್ಲಿ ಗ್ರಾಮದ ಪ್ರತಿ ಕುಟುಂಬದಲ್ಲಿ ಒಗ್ಗಟ್ಟು ಮೂಡಿಸಿರುವುದು ಹೆಮ್ಮೆಯ ಸಂಗತಿ. ಗ್ರಾಮಗಳ ಅಭಿವೃದ್ಧಿಗೆ ಶಾಸಕರು ಒತ್ತು ನೀಡುತ್ತಿದ್ದಾರೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಾಣೇಹಳ್ಳಿ ರೇಣುಕಾರಾಧ್ಯ ಮಾತನಾಡಿ, ಗ್ರಾಮದ ಎಲ್ಲರೂ ಸೇರಿ ಒಗ್ಗಟ್ಟಾಗಿ ದೇವಸ್ಥಾನ ನಿರ್ಮಾಣದಲ್ಲಿ ಶ್ರಮಿಸಿದ್ದಾರೆೆ ಎಂದರು. ಕೆ.ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಮತ್ತು ಭಗೀರಥ ಪೀಠದ ಡಾ. ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ನೂತನ ದೇವಸ್ಥಾನದ ಕಲಶಾರೋಹಣ ನೆರವೇರಿಸಿದರು. ಬಳಿಕ ಗ್ರಾಮದಲ್ಲಿ ನಿರ್ಮಾಣಗೊಂಡ 45 ಲಕ್ಷ ರೂ. ವೆಚ್ಚದ ಸಿಮೆಂಟ್ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಜಿ.ಡಿ.ಶಂಕರಪ್ಪ, ಕರಿಯಮ್ಮ ದೇವಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ವಿರೂಪಾಕ್ಷಪ್ಪ, ಕಾರ್ಯದರ್ಶಿ ಪುಟ್ಟಲಿಂಗಪ್ಪ, ಕುಳುವ ಸಮಾಜದ ಅಧ್ಯಕ್ಷ ಎ.ಜಿ.ಗಿರೀಶ್, ದೊಣ್ಣೆಕೋರನಹಳ್ಳಿ ಉಮೇಶ್, ಚೇತನ್ ಕೆಂಪರಾಜ್, ಗ್ರಾಪಂ ಸದಸ್ಯ ತಮ್ಮಯ್ಯ, ತಿಪ್ಪೇಶ್, ಸಾಣೇಹಳ್ಳಿ ನಿಂಗಪ್ಪ ಹಾಗೂ ದೇವಸ್ಥಾನದ ಗುಡಿಗೌಡರು ಮತ್ತು ಗ್ರಾಮಸ್ಥರು ಇದ್ದರು.