ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಆತ್ಮಹತ್ಯೆಯನ್ನು ತಡೆಗಟ್ಟುವಂತಹ ಸಂಶೋಧನಾತ್ಮಕ ವಿಷಯಗಳನ್ನು ಮಂಡಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಚಂದ್ರಮೌಳಿ ಹೇಳಿದರು.
ಭಾರತೀಯ ಸಮಾಜ ವಿಜ್ಞಾನ ಸಂಶೋಧನೆ ಮಂಡಳಿ ಸಹಯೋಗದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಹಾಗೂ ಸಂಶೋಧನಾ ವಿಭಾಗ, ಮುಕ್ತ ವಿವಿ ಗ್ರಂಥಾಲಯ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಮಾಜ ವಿಜ್ಞಾನದಲ್ಲಿ ಎಂಫಿಲ್, ಪಿಎಚ್.ಡಿ, ಪಿಡಿಎ್ ಮಹಿಳಾ ಸಂಶೋಧಕರಿಗೆ ಸಂಶೋಧನಾ ವಿಧಾನ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕೆಲ ಉಪನ್ಯಾಸಕರು ಬಡ್ತಿಗೋಸ್ಕರ, ಪಿಎಚ್.ಡಿಗಳನ್ನು ಮಾಡುತ್ತಾರೆ. ಹಾಗೇ ಮಾಡುವುದರಿಂದ ನಿಮಗಷ್ಟೇ ಉಪಯೋಗವಾಗಲಿದೆ. ಆದರೆ, ಸಮಾಜದ ಅಭಿವೃದ್ಧಿಗೆ ಪೂರಕವಾದ ಸಂಶೋಧನೆಗಳಾಗಬೇಕು ಎಂದು ಸಲಹೆ ನೀಡಿದರು.
ಸಂಶೋಧನೆ ಮಾಡುವಾಗ ಆಳವಾಗಿ ವಿಷಯಗಳನ್ನು ಅಧ್ಯಯನ ಮಾಡಿ ಬರೆಯಬೇಕು. ನಾವು ಮಾಡುವ ಸಂಶೋಧನೆಗಳು ಸಮಾಜದ ವ್ಯವಸ್ಥೆಯನ್ನು ಬದಲಾಯಿಸಬೇಕು. ಸಂಶೋಧನೆಗಳು ಪುಸ್ತಕಗಳಲ್ಲಿನ ರೂಪವಾಗಬಾರದು, ಸಮಾಜದ ಏಳಿಗೆಗೆ ಪೂರಕವಾಗಿರಬೇಕು ಎಂದರು.
ಬೆಂಗಳೂರು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಲಲಿತಾ ಅಶ್ವತ್ಥ್ ಮಾತನಾಡಿ, ಸಂಶೋಧನೆ ಮಾಡುವವವರು ಮೊದಲು ನಿರ್ದಿಷ್ಟ ವಿಷಯಗಳನ್ನು ಕೇಂದ್ರಿಕರಿಸಿ ಅಧ್ಯಯನ ಮಾಡಬೇಕು. ನಂತರ ಹಂತಹಂತವಾಗಿ ಸಮಾಜದಲ್ಲಿನ ಬೆಳವಣಿಗೆಯ ವಿಷಯಗಳನ್ನು ತಿಳಿಯಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ದತ್ತಾಂಶ ಡಿಜಿಟಲೀಕರಣದ ಸಂಶೋಧನಾ ಪದ್ಧತಿ ವಿಕಸನದತ್ತ ಹೋಗುತ್ತಿದೆ. ದತ್ತಾಂಶ ಸಂಗ್ರಹಣೆ ಮಾಡುವುದರ ಜತೆಗೆ, ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದರೆ, ತುಂಬ ಅನುಕೂಲವಾಗುತ್ತದೆ ಎಂದರು.
ತಂತ್ರಜ್ಞಾನ ಎಷ್ಟು ಮುಂದುವರೆದರೂ ಸಂಶೋಧನೆಗಳು ಎಂದಿಗೂ ನಿಲ್ಲುವುದಿಲ್ಲ. ಸಂಶೋಧನೆಗಳ ಮೂಲಕವೇ ಹೊಸ ಅಧ್ಯಯನಕ್ಕೆ ಮಾರ್ಗ ಸಿಗುವುದು. ಸಂಶೋಧನೆ ಮಾಡಲು ಆಸಕ್ತಿ ವಹಿಸಿ, ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ಕುಲಸಚಿವರಾದ ಪ್ರೊ.ಎಸ್.ಕೆ.ನವೀನ್‌ಕುಮಾರ್, ಪ್ರೊ.ಸಿ.ಎಸ್.ಆನಂದ್‌ಕುಮಾರ್, ಡೀನ್‌ರಾದ ಪ್ರೊ.ರಾಮನಾಥಂ ನಾಯ್ಡು, ಡಾ.ಎನ್.ಆರ್.ಚಂದ್ರೇಗೌಡ, ಹಣಕಾಸು ಅಧಿಕಾರಿ ಪ್ರೊ.ನಿರಂಜನ್ ರಾಜ್, ಡಾ.ಕೆ.ಪ್ರಕಾಶ್, ಡಾ.ಎನ್.ಆರ್.ಶಿಲ್ಪಾ ರಾಣಿ ಮತ್ತಿತರರು ಇದ್ದರು.