ಪಿರಿಯಾಪಟ್ಟಣ: ತಂಬಾಕು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿ ಮುಂಭಾಗ ರಾಜ್ಯ ರೈತ ಸಂಘ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ತಂಬಾಕಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ಅನಧಿಕೃತ ತಂಬಾಕು ಬೆಳೆಗಾರರಿಗೆ ತಂಬಾಕು ಮಾರಾಟ ಮಾಡಲು ಅವಕಾಶ ನೀಡದ ಕಾರಣ ಬೆಳೆಗಾರರು ಸಂಕಷ್ಟಕೀಡಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ 98 ಮಿಲಿಯನ್ ತಂಬಾಕು ಉತ್ಪಾದನೆ ಮಾಡಲು ತಂಬಾಕು ಮಂಡಳಿಯಿಂದ ಅನುಮತಿ ದೊರೆತಿತ್ತು. ಆದರೆ ಅತಿವೃಷ್ಟಿಯಿಂದ ಕೇವಲ 55 ರಿಂದ 60 ಮಿಲಿಯನ್ ತಂಬಾಕು ಮಾತ್ರ ಉತ್ಪಾದನೆಯಾಗಿದೆ ಎಂದು ಹೇಳಿದರು.
ಕರ್ನಾಟಕದ ಗುಣಮಟ್ಟದ ವರ್ಜಿನಿಯಾ ತಂಬಾಕಿಗೆ ವಿದೇಶಗಳಲ್ಲಿ ಅಪಾರ ಬೇಡಿಕೆ ಇದೆ. ವಿದೇಶಗಳಿಗೆ ಶೇ. 90ರಷ್ಟು ತಂಬಾಕು ರಫ್ತಾಗುತ್ತಿದೆ. ತಂಬಾಕು ಮಾರಾಟದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತೆರಿಗೆ ಕೂಡ ಲಭಿಸುತ್ತಿದೆ. ಆದರೆ ಲಾಭ ಮಾಡುತ್ತಿರುವ ಸರ್ಕಾರ ಮತ್ತು ಕಂಪನಿಗಳು ತಂಬಾಕಿಗೆ ಸೂಕ್ತ ಬೆಲೆ ನೀಡದೆ ರೈತರ ಶೋಷಣೆ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಸಾಲಿನ ಪ್ರಾರಂಭದ ದಿನಗಳಲ್ಲಿ ಉತ್ತಮ ಗುಣಮಟ್ಟದ ತಂಬಾಕಿಗೆ ಪ್ರತಿ ಕೆಜಿಗೆ 270 ರೂ.ವರೆಗೆ ದರ ನೀಡಿ ಖರೀದಿಸಿದ್ದ ಖರೀದಿದಾರ ಕಂಪನಿಗಳು ಈಗ ಅದೇ ಗುಣಮಟ್ಟದ ತಂಬಾಕೆಗೆ ಕೇವಲ 220ರಿಂದ 230 ರೂ.ನೀಡಿ ಖರೀದಿಸುವ ಮೂಲಕ ತಂಬಾಕು ಬೆಳೆಗಾರರಿಗೆ ಅನ್ಯಾಯವೆಸಗುತ್ತಿದ್ದಾರೆ. ಇದರಿಂದಾಗಿ ತಂಬಾಕು ಬೆಳೆದ ರೈತ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾನೆ. ತಂಬಾಕು ಬೆಳೆಯುವ ಪ್ರದೇಶಗಳ ಮತದಾರದಿಂದ ಸಂಸದರಾದ ಪ್ರತಾಪ ಸಿಂಹ, ಶ್ರೀನಿವಾಸ ಪ್ರಸಾದ್, ಸುಮಲತಾ ಅಂಬರೀಶ್ ಮತ್ತು ಪ್ರಜ್ವಲ್ ರೇವಣ್ಣ ಅವರು ತಂಬಾಕು ರೈತರ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ ಮಾಡುತ್ತಿರುವುದು ಖಂಡನೀಯ ಎಂದು ಟೀಕಿಸಿದರು.
ರಾಜ್ಯ ಸರ್ಕಾರವು ಮಧ್ಯ ಪ್ರವೇಶಿಸಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವ ಮೂಲಕ ಪ್ರತಿ ಕೆಜಿ ತಂಬಾಕಿಗೆ 250 ರೂ. ಸರಾಸರಿ ದರ ದೊರಕುವಂತೆ ಕ್ರಮಕೈಗೊಳ್ಳಬೇಕು ಎಂದು ಅಗ್ರಹಿಸಿದರು. ಅನಧಿಕೃತವಾಗಿ ತಂಬಾಕು ಬೆಳೆದಿರುವ ರಾಜ್ಯದ ಸುಮಾರು 18,000 ಅನಧಿಕೃತ ಬೆಳೆಗಾರರಿಗೆ ಕೂಡಲೇ ತಂಬಾಕು ಮಾರಾಟ ಮಾಡಲು ಅನುಮತಿ ನೀಡಿ, ಪರವಾನಗಿ ಕೊಡಿಸಬೇಕು. ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿದ್ದು, ರಾಸಾಯನಿಕ ಗೊಬ್ಬರವನ್ನು ಸಾಲವಾಗಿ ಪಡೆದಿರುವ ರೈತರಿಗೆ ಪರಿಹಾರ ರೂಪದಲ್ಲಿ ಹಣ ಹಿಂದಿರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಒಂದು ವಾರದ ಹಿಂದೆಯೇ ಮಾಹಿತಿ ನೀಡಿದ್ದರೂ ತಂಬಾಕು ಮಂಡಳಿಯ ಹರಾಜು ನಿರ್ದೇಶಕಿ ಅಶ್ವಿನಿ ನಾಯ್ಡು ಸ್ಥಳಕ್ಕೆ ಬಾರದೆ ನಿರ್ಲಕ್ಷೃ ತೋರಿದ್ದಾರೆ ಎಂದು ಪ್ರತಿಭಟನಾಕಾರರು ತಂಬಾಕು ಮಂಡಳಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲಿ ಹಾಜರಿದ್ದ ತಂಬಾಕು ಮಂಡಳಿಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಎಚ್.ಸಿ.ಬಸವರಾಜ್, ತಂಬಾಕು ಮಂಡಳಿ ಜಿ.ಸಿ.ವಿಕ್ರಂರಾಜ್ ಮತ್ತು ಎಚ್.ಆರ್.ದಿನೇಶ್ ಪ್ರತಿಭಟನಾಕಾರರನ್ನು ಸಮಾಧಾನಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಯದುಗಿರೀಶ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಲಕ್ಷ್ಮಣ್‌ರಾವ್, ಹರಾಜು ಅಧೀಕ್ಷಕರಾದ ಶಂಭುಲಿಂಗೇಗೌಡ, ರಾಮ್‌ಮೋಹನ್ ಸೂರಿ, ಪ್ರಭಾಕರನ್, ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೇತ್ರಾವತಿ, ತಾಲೂಕು ಅಧ್ಯಕ್ಷ ಕೆ.ಎಸ್.ಸ್ವಾಮಿಗೌಡ, ರೈತ ಸಂಘದ ಮುಖಂಡರಾದ ದೇವರಾಜು, ಮಲ್ಲೇಶ್, ಅಶ್ವಥ್ ನಾರಾಯಣ, ರಾಜೇಅರಸ್, ಚಂದ್ರೇಗೌಡ, ಗಡಿ ಗೌಡ, ನವೀನ ರಾಜೇ ಅರಸ್, ದಶರಥ, ಹುಣಸೂರು ಗುರುಮೂರ್ತಿ, ಬೆಂಕಿಪುರ ಚಿಕ್ಕಣ್ಣ, ಎಚ್.ಡಿ.ಕೋಟೆ ಮಹಾದೇವ ನಾಯಕ, ದಸಂಸ ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ, ಗಜೇಂದ್ರ, ರಾಜಣ್ಣ, ಭೀಮ್ ಆರ್ಮಿ ಅಧ್ಯಕ್ಷ ಗಿರೀಶ್, ಶ್ರೀನಿವಾಸ್.ಆರ್.ತುಂಗಾ, ಗುರುರಾಜ್, ಡೈರಿ ಮಹೇಶ್, ಮಹದೇವ ಹರವೆ, ಕೆ.ಕೆ.ಕುಮಾರ್, ಬಿ.ಆರ್.ಸುರೇಶ್, ರಾಮೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.