ನ್ಯೂಸ್

ರೇಷ್ಮೆ ಬೆಳೆಗಾರರಿಂದಲೇ ಬಂದ್‌ಗೆ ವಿರೋಧ : ಕೆಲವರ ಹಿತಾಸಕ್ತಿ ಅಡಗಿದೆ ಎಂದು ಆರೋಪ

 ರಾಮನಗರ :  ನಗರದ ರೇಷ್ಮೆಗೂಡು ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ಕರೆ ನೀಡಿರುವ ಬಂದ್‌ಗೆ ಬೆಳೆಗಾರರಿಂದಲೇ ವಿರೋಧ ವ್ಯಕ್ತವಾಗಿದೆ.

ಗೂಡು ಮಾರುಕಟ್ಟೆಯನ್ನು ಮೇಲ್ದರ್ಜೆಗೆ ಏರಿಸಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನಗೆ ದೊರೆತ ಜಾಗದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸುತ್ತಿದೆ. ಆದರೆ ಇದನ್ನೇ ನೆಪವಾಗಿ ಇಟ್ಟುಕೊಂಡು ಮಾರುಕಟ್ಟೆ ಬಂದ್ ಮಾಡಿದರೆ ಖಂಡಿತವಾಗಿ ರೈತರಿಗೆ ನಷ್ಟ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಗ ಇರುವ ಕಡೆ ಮಾರುಕಟ್ಟೆ ಸ್ಥಳಾಂತರ ಮಾಡಲಾಗುತ್ತಿದೆ. ಇದರಲ್ಲಿ ರಾಜಕೀಯ ಏನು ಬಂತು. ರಾಮನಗರದ ರೈತರು ಹೆಚ್ಚಿಗೆ ಬೆಲೆ ಸಿಕ್ಕಿದ್ದರೆ ಕೊಳ್ಳೇಗಾಲ, ಶಿಢ್ಲಘಟ್ಟಕ್ಕೆ ಗೂಡು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಇನ್ನು ಪಕ್ಕದ ವಂದಾರಗುಪ್ಪೆಗೆ ಹೋಗುವುದಿಲ್ಲವೇ ಎಂದು ರೈತರು ಪ್ರಶ್ನೆ ಮಾಡಿದ್ದಾರೆ.

ಈಗ ಇರುವ ಮಾರುಕಟ್ಟೆಯಲ್ಲಿ ನಮ್ಮ ವಾಹನಗಳನ್ನು ನಿಲ್ಲಿಸಿಕೊಳ್ಳಲು ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಗೂಡು ತುಂಬಲು ಬರುವ ದೊಡ್ಡ ರೀಲರ್‌ಗಳಿಗೆ ವಾಹನವನ್ನು ಒಳಗೆ ತರಲು ಸಾಧ್ಯವಾಗುತ್ತಿಲ್ಲ.

ಇಂತಹ ಸನ್ನಿವೇಶದಲ್ಲಿ ಮಾರುಕಟ್ಟೆ ಅಭಿವೃದ್ಧಿ ಹೇಗೆ ಸಾಧ್ಯ. ಈ ಹಿನ್ನೆಲೆಯಲ್ಲಿ ಮತ್ತೊಂದು ಕಡೆ ರೇಷ್ಮೆ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ಇದಕ್ಕೆ ಯಾವುದೇ ಬೆಳೆಗಾರರು ವಿರೋಧ ಮಾಡುತ್ತಿಲ್ಲ ಎಂದು ಜಿಲ್ಲಾ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಗೌತಮ್‌ಗೌಡ ತಿಳಿಸಿದ್ದಾರೆ.

ಅಲ್ಲದೆ, ಬಂದ್ ಆಚರಣೆಗೂ ಮುನ್ನ ರೈತರೊಂದಿಗೆ ಚರ್ಚಿಸಿ ನಿರ್ಧಾರ ಮಾಡಬೇಕಿತ್ತು. ಒಂದು ದಿನ ರೇಷ್ಮೆ ಗೂಡು ಇಟ್ಟರೆ ಏನೆಲ್ಲಾ ಸಮಸ್ಯೆ ಆಗುತ್ತದೆ ಎನ್ನುವ ಅರಿವು ಬಂದ್‌ಗೆ ಕರೆ ನೀಡಿರುವ ರೀಲರ್‌ಗಳಿಗೆ ಇದೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ಗೌತಮ್‌ಗೌಡ ತಿಳಿಸಿದ್ದಾರೆ.

ರೀಲರ್‌ಗಳು ಪಾಲ್ಗೊಳ್ಳುವುದಿಲ್ಲ್ಲ:  ಈ ನಡುವೆ ಮಾರುಕಟ್ಟೆ ಸ್ಥಳಾಂತರಕ್ಕೆ ರೀಲರ್‌ಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬಂದ್‌ಗೆ ಬೆಂಬಲ ಸೂಚಿಸುವ ಸಲುವಾಗಿ ಶನಿವಾರದ ವಹಿವಾಟಿನಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದಾರೆ. ಈ ವಿಷಯವನ್ನು ಮಾರುಕಟ್ಟೆ ಅಧಿಕಾರಿಗಳ ಗಮನಕ್ಕೂ ತಂದಿದ್ದು, ಶನಿವಾರ ಬಹುತೇಕ ಗೂಡು ಖರೀದಿ ಪ್ರಕ್ರಿಯೆ ನಡೆಯುವುದು ಅನುಮಾನ. ಆದರೆ, ಮಾರುಕಟ್ಟೆ ಅಧಿಕಾರಿಗಳು ಲಭ್ಯರಿದ್ದು, ಒಂದು ವೇಳೆ ರೈತರು ಮತ್ತು ರೀಲರ್‌ಗಳು ಪಾಲ್ಗೊಂಡರೆ ಎಂದಿನಂತೆ ಕಾರ್ಯನಿರ್ವಹಿಸಲಿದ್ದಾರೆ.

ತಾಲೂಕು ಆಡಳಿತದಿಂದ ನಿಷೇಧಾಜ್ಞೆ ಜಾರಿ :  ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಫೆ.19ರ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿ ತಾಲೂಕು ಆಡಳಿತ ಆದೇಶ ಹೊರಡಿಸಿದೆ. ಈ ಸಂಬಂಧ ಆದೇಶ ಹೊರಡಿಸಿರುವ ತಹಸೀಲ್ದಾರ್ ನರಸಿಂಹಮೂರ್ತಿ, ಫೆ.19ರ ರಾತ್ರಿ 10 ಗಂಟೆಯಿಂದ ಫೆ.21ರ ರಾತ್ರಿ 10 ಗಂಟೆವರೆಗೆ ಯಾವುದೇ ಸಾರ್ವಜನಿಕ ಮೆರವಣಿಗೆ, ಪ್ರತಿಭಟನೆ, ಧರಣಿ, ಜಾಥಾ, ಮುಷ್ಕರ, ರಸ್ತೆತಡೆ, ಸಾರ್ವಜನಿಕ, ರಾಜಕೀಯ ಸಭೆ ಮತ್ತು ಸಮಾರಂಭ ನಡೆಸದಂತೆ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ನಿರ್ಮಾಣ ರದ್ದು ಮಾಡಲು ಸೂಚಿಸುತ್ತೇನೆ

ರಾಮನಗರ: ಬಂದ್ ಹೆಸರಲ್ಲಿ ರಾಮನಗರ ಉದ್ದಾರ ಮಾಡುತ್ತೇನೆ ಎನ್ನುವವರು ಉದ್ದಾರ ಮಾಡಲಿ, ನಾನು ಹೈಟೆಕ್ ಮಾರುಕಟ್ಟೆ ನಿರ್ಮಾಣ ರದ್ದುಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೆನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ರಾಮನಗರದ ಮುಸ್ಲಿಂ ಬಾಂಧವರು ಶುಕ್ರವಾರ ನನ್ನನ್ನು ಭೇಟಿ ಮಾಡಿದ್ದರು. ಸುಮ್ಮನೆ ನಮ್ಮ ಸಮುದಾಯದ ದ್ವೇಷ ಕಟ್ಟಿಕೊಳ್ಳುತ್ತೀರಿ ಎಂದರು. ಜಿಲ್ಲೆಯಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡಿ, ರೈತರು ಮತ್ತು ರೀಲರ್‌ಗಳಿಗೆ ಒಳ್ಳೆಯದು ಮಾಡಬೇಕೆಂಬುದು ನನ್ನ ಆಸೆಯಾಗಿತ್ತು. ಹಾಗಾಗಿ ಯೋಜನೆ ತಂದೆ. ಆದರೆ ಕೆಲವರು ನನ್ನ ಯೋಜನೆಗಳಿಗೆ ಬಣ್ಣ ಕಟ್ಟಿ ಅಪಪ್ರಚಾರ ಮಾಡಲು ಹೊರಟಿರುವುದು ನೋವು ತಂದಿದೆ,. ಯೋಜನೆಯನ್ನು ರದ್ದುಪಡಿಸುವಂತೆ ಅಧಿಕಾರಿಗಳಿಗೆ ಹೇಳುತ್ತೇನೆ. ಶಿಢ್ಲಘಟ್ಟದಲ್ಲೋ, ಕೊಳ್ಳೇಗಾಲದಲ್ಲೋ ಯೋಜನೆ ಮಾಡಿಕೊಳ್ಳಲಿ. ಆದರೆ, ರಾಮನಗರ ಜನತೆ ಮತ್ತು ನನ್ನ ನಡುವಿನ ಬಾಂಧವ್ಯ ಏನು ಎನ್ನುವುದನ್ನು ಹೇಳಲು ಸಾಧ್ಯವಿಲ್ಲ, ಬಂದ್ ಮೂಲಕ ಉದ್ದಾರ ಮಾಡಲು ಹೊರಟಿರುವರು ಮಾಡಲಿ. ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿಯೇ ಮಾರಾಟ ನಡೆಯಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೀಲರ್‌ಗಳು ಶನಿವಾರ ಖರೀದಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಮಾರುಕಟ್ಟೆ ಅಧಿಕಾರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ರೈತರು ಗೂಡು ತಂದು, ರೀಲರ್‌ಗಳು ಖರೀದಿಸಿದರೆ ಅದಕ್ಕೆ ಎಂದಿನಂತೆ ಅವಕಾಶ ನೀಡುತ್ತೇವೆ. ಮುನ್ಷಿ ಬಸಯ್ಯ ಉಪನಿರ್ದೇಶಕರು, ರೇಷ್ಮೆ ಮಾರುಕಟ್ಟೆ

  • ರಾಮನಗರದಲ್ಲಿ ಜಾಗದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಲಭ್ಯ ಜಾಗದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಯಾರಿಗೋ ಅನ್ಯಾಯ ಮಾಡುವ, ಮತ್ಯಾರಿಗೋ ಲಾಭ ಮಾಡಿಕೊಡುವ ಉದ್ದೇಶ ಇಲ್ಲ. ರೈತರು ಮತ್ತು ರೀಲರ್‌ಗಳಿಗೆ ಅನುಕೂಲವಾಗಲಿದೆ. ಉತ್ತಮ ಸೌಲಭ್ಯಗಳು ದೊರೆಯುತ್ತವೆ. ಯೋಜನೆ ಜಾರಿಗೆ ಬರಲಿದೆ.ಡಾ. ಸಿ.ಎನ್. ಅಶ್ವಥನಾರಾಯಣಡಿಸಿಎಂ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ
  • ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ರೈತರಿಗೆ ಯಾವುದೇ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಂದು ಕಡೆ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಕೊಳ್ಳೇಗಾಲ, ಶಿಢ್ಲಘಟ್ಟಕ್ಕೆ ಹೋಗುವ ನಾವು 4-5 ಕಿಲೋ ಮೀಟರ್ ದೂರದಲ್ಲಿ ನಿರ್ಮಾಣವಾಗಲಿರುವ ಮಾರುಕಟ್ಟೆಗೂ ಹೋಗುತ್ತೇವೆ. ಇದು ಕೆಲವರ ಹಿತಾಸಕ್ತಿಗೆ ಕರೆದಿರುವ ಬಂದ್. ಗೌತಮ್‌ಗೌಡ ರೇಷ್ಮೆ ಬೆಳಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ, ರಾಮನಗರ ಜಿಲ್ಲೆ