ನ್ಯೂಸ್

ರೇಣುಕಾಸ್ವಾಮಿ ಮೃತದೇಹ ನೋಡಿ ತಂದೆ ದಿಗ್ಭ್ರಾಂತ

ಚಿತ್ರದುರ್ಗ: ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಶೆಡ್ ಒಂದರಲ್ಲಿ ಜೂ. 9ರಂದು ಕೊಲೆಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಮೃತದೇಹ ನೋಡಿ ತಂದೆ ದಿಗ್ಭ್ರಾಂತರಾಗಿದ್ದಾರೆ. ಪತ್ನಿ ಐದು ತಿಂಗಳ ಗರ್ಭಿಣಿ. ಈ ಪ್ರಕರಣದಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೊಲೀಸರ ಅತಿಥಿಯಾಗಿದ್ದಾರೆ.

ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಕೊಲೆ ಪ್ರಕರಣ ಆರೋಪದಡಿ ನಟ ದರ್ಶನ್‌ರನ್ನು ಬಂಧಿಸಲಾಗಿದ್ದು, ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ರವಾನಿಸುತ್ತಿದ್ದ ಎಂಬ ಆರೋಪ ಕೂಡ ಮೃತ ಯುವಕನ ಮೇಲೆ ಕೇಳಿಬಂದಿದೆ.

ನಗರದ ವಿಆರ್‌ಎಸ್ ಬಡಾವಣೆಯ ರೇಣುಕಾಸ್ವಾಮಿ ಕೆಇಬಿ ನಿವೃತ್ತ ಇಂಜಿನಿಯರ್ ಕಾಶಿನಾಥ್ ಶಿವನಗೌಡ್ರು, ರತ್ನಪ್ರಭಾ ದಂಪತಿಯ ಪುತ್ರ ಎಂದು ತಿಳಿದುಬಂದಿದೆ. ಕಳೆದ ವರ್ಷ ದಾವಣಗೆರೆ ಜಿಲ್ಲೆ ಹರಿಹರದ ಸಹನಾ ಎಂಬುವರನ್ನು ವಿವಾಹವಾಗಿದ್ದರು. ಅವರೀಗ 5 ತಿಂಗಳ ಗರ್ಭಿಣಿ ಎಂಬ ಮಾಹಿತಿ ಇದೆ. ಜೂ. 26ಕ್ಕೆ ವಿವಾಹವಾಗಿ ಮೊದಲ ವಾರ್ಷಿಕೋತ್ಸವ ಸಮಾರಂಭ ಆಚರಿಸಿಕೊಳ್ಳಬೇಕಿತ್ತು.

ಘಟನೆ ಹಿನ್ನೆಲೆ: ಕೆಲಸಕ್ಕೆ ಹೋಗಿದ್ದ ರೇಣುಕಾಸ್ವಾಮಿ ಶನಿವಾರ ನಾಪತ್ತೆಯಾಗಿದ್ದು, ಕಿಡ್ನಾಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಮಧ್ಯಾಹ್ನ ಹೊರಗೆ ಊಟ ಮಾಡುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದ. ಆದರೆ, ಮಧ್ಯಾಹ್ನದ ನಂತರ ಮೊಬೈಲ್ ಸ್ವಿಚ್ ಆಫ್ ಆಗಿದೆ.

ಒಂದೆಡೆ ಫೋನ್ ಸ್ವಿಚ್ ಆಫ್, ಮತ್ತೊಂದೆಡೆ ಎರಡ್ಮೂರು ದಿನವಾದರೂ ಕೆಲಸಕ್ಕೆ ಹೋಗಿದ್ದ ಮಗ ಮನೆಗೆ ಹಿಂದಿರುಗಿಲ್ಲ. ಇದು ಕುಟುಂಬಸ್ಥರಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಬೈಕ್ ದುರ್ಗದಲ್ಲಿ, ಮೃತದೇಹ ಬೆಂಗಳೂರಿನಲ್ಲಿ: ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ಬಾಲಾಜಿ ಬಾರ್ ಬಳಿ ಯುವಕನ ಬೈಕ್ ಮಾತ್ರ ಪತ್ತೆಯಾಗಿದೆ. ಕಾಮಾಕ್ಷಿ ಪಾಳ್ಯ ವ್ಯಾಪ್ತಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ಇಡೀ ಕುಟುಂಬ ದಿಗ್ಭ್ರಾಂತರಾಗಿದ್ದು, ದೊಡ್ಡ ಆಘಾತ ಉಂಟಾಗಿರುವುದು ಮಾತ್ರವಲ್ಲ. ಶೋಕದಲ್ಲಿ ಮುಳುಗಿದೆ.

ಪೊಲೀಸರು ಆತನ ತಂದೆಗೆ ಕರೆ ಮಾಡಿದ ನಂತರ ತಕ್ಷಣ ಬೆಂಗಳೂರಿಗೆ ಹೋಗಿದ್ದಾರೆ. ರೇಣುಕಾಸ್ವಾಮಿ ಕೊಲೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಸ್ನೇಹಿತರು, ಹಿತೈಷಿಗಳು ಮನೆಯತ್ತ ದೌಡಾಯಿಸುತ್ತಿದ್ದಾರೆ.

ಮೆಡಿಕಲ್ ಫಾರ್ಮಸಿಯಲ್ಲಿ ಕೆಲಸ: ರೇಣುಕಾಸ್ವಾಮಿ ಕಳೆದ 3-4 ವರ್ಷಗಳಿಂದ ನಗರದ ವಿವಿಧೆಡೆಯ ಖಾಸಗಿ ಕಂಪನಿಯೊಂದರ ಮೆಡಿಕಲ್ ಫಾರ್ಮಸಿಯಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದು, ನಾಲ್ಕೈದು ತಿಂಗಳಿಂದ ಐಯುಡಿಪಿ ಬಡಾವಣೆಯ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ. ಉತ್ತಮ ಕೆಲಸಗಾರ ಎಂಬುದಾಗಿ ಸಹದ್ಯೋಗಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಅಥವಾ ಬೋರಿಂಗ್ ಆಸ್ಪತ್ರೆಯಲ್ಲಿ ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.