ಶ್ರೀ ರೇಣುಕಾಂಬ ದೇವಸ್ಥಾನ 
ನ್ಯೂಸ್

ರೇಣುಕಾಂಬ ದೇವಸ್ಥಾನ ಭೂಮಿ ಸಮಸ್ಯೆ ಇತ್ಯರ್ಥ

ಸೊರಬ: ಶ್ರೀ ರೇಣುಕಾಂಬ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ತೊಡಕಾಗಿದ್ದ ಜಿಲ್ಲಾ ಅರಣ್ಯ ಪ್ರದೇಶದಲ್ಲಿ 10 ಎಕರೆ ಅರಣ್ಯ ಪ್ರದೇಶವನ್ನು ಪಡೆದುಕೊಂಡು 20 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿರುವ ಬಗ್ಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನುಮೋದನೆ ನೀಡಿ ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಆದೇಶ ಪತ್ರ ನೀಡಿದ್ದಾರೆ.

ಶ್ರೀ ರೇಣುಕಾಂಬ ದೇವಸ್ಥಾನ ಇರುವ ಸರ್ವೇ ನಂ.185ರಲ್ಲಿ 10 ಎಕರೆ ಜಿಲ್ಲಾ ಅರಣ್ಯ ಪ್ರದೇಶದ ಜಮೀನನ್ನು ದೇವಸ್ಥಾನದ ಅಭಿವೃದ್ಧಿಗೆ ಪಡೆದುಕೊಂಡು ಚಂದ್ರಗುತ್ತಿ ಹೋಬಳಿಯ ಹೊಳೆ ಮರೂರು ಗ್ರಾಮದ ಸರ್ವೇ ನಂ.187 ರಲ್ಲಿರುವ 20 ಎಕರೆ ಕಂದಾಯ ಭೂಮಿಯನ್ನು ಪರಿಹಾರಾರ್ಥವಾಗಿ ಅರಣ್ಯ ಪ್ರದೇಶಕ್ಕೆ ನೀಡುವ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಜಮೀನಿನ ಪ್ರಸ್ತಾವನೆಯಲ್ಲಿನ ನಕ್ಷೆಯಲ್ಲಿ ನಮೂದಿಸಿ ಚಕ್ಕಬಂದಿಗೆ ಅನುಸಾರವಾಗಿ ಅರಣ್ಯ ಇಲಾಖೆಯ ಹೆಸರಿನಲ್ಲಿ ಕಾಯ್ದಿರಿಸಲು ಸರ್ಕಾರದ ಅನುಮೋದನೆ ಪಡೆಯುವ ಷರತ್ತಿಗೆಗೊಳಪಟ್ಟು ಹೊರಡಿಸಿರುವ ಆದೇಶಕ್ಕೆ ಅನುಮೋದನೆ ನೀಡಲಾಗಿದೆ. ಈ ಸಂಬಂಧ ನಿಯಮಾನುಸಾರ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ.

ರಾಜ್ಯ ಸರ್ಕಾರದ ಅನುಮೋದನೆ ಪಡೆದ ಬಳಿಕ ಮುಂದೆ ಕಂದಾಯ ಇಲಾಖೆ ಅರಣ್ಯ ಸಂರಕ್ಷಣಾ ಕಾಯ್ದೆ 1980ರನ್ವಯ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಲು ಪರಿವೇಶ್ ತಂತ್ರಾಂಶದಲ್ಲಿ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ದೇವಸ್ಥಾನದ ಅಭಿವೃದ್ದಿ ಕಾಮಗಾರಿ ಆರಂಭಿಸಬೇಕಿದೆ.

ಹಲವು ದಶಕಗಳಿಂದ ಚಂದ್ರಗುತ್ತಿ ದೇವಸ್ಥಾನದ ಸುತ್ತಮುತ್ತಲಿನ ಅಭಿವೃದ್ಧಿಗೆ ಜಿಲ್ಲಾ ಅರಣ್ಯ ಪ್ರದೇಶ ತೊಡಕಾಗಿತ್ತು. ಈ ಬಗ್ಗೆ ಸಚಿವ ಮಧು ಬಂಗಾರಪ್ಪ ಹಿಂದಿನ ಸಾಗರ ಉಪವಿಭಾಗಾಧಿಕಾರಿ ಯತೀಶ್ ನೇತೃತ್ವದಲ್ಲಿ ಮೂರು ಬಾರಿ ಚಂದ್ರಗುತ್ತಿಯಲ್ಲಿ ಸಭೆ ನಡೆಸಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ದೇವಸ್ಥಾನದ ಅಭಿವೃದ್ಧಿಗೆ ಕಂದಾಯ ಭೂಮಿಯನ್ನು ನೀಡಿ ಅರಣ್ಯ ಜಮೀನನ್ನು ಪಡೆಯುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈಗ ಈ ಆದೇಶದಿಂದ ಪರಸ್ಪರ ಜಮೀನಿನ ವರ್ಗಾವಣೆಯಿಂದ ನನೆಗುದಿಗೆ ಬಿದ್ದಿರುವ ಪೊಲೀಸ್ ಠಾಣೆ ಸಮುದಾಯ ಭವನ ಹಾಗೂ ದೇವಸ್ಥಾನದ ಸುತ್ತಮುತ್ತಲಿನ ಅಭಿವೃದ್ಧಿ ಕಾಮಗಾರಿಗೆ ಸಹಕಾರಿಯಾಗಲಿದೆ.