ಮದ್ದೂರು: ಪಟ್ಟಣದ ಹೊಳೆ ಬೀದಿಯಲ್ಲಿರುವ, ಚಿಕ್ಕಸವದತ್ತಿ ಎಂದೇ ಪ್ರಸಿದ್ಧಿಯಾಗಿರುವ ಶ್ರೀ ರೇಣುಕಾ ಯಲ್ಲಮ್ಮ ದೇವರ ಜಾತ್ರಾ ಮಹೋತ್ಸವವವು ಶನಿವಾರ ಸಡಗರದಿಂದ ಆರಂಭಗೊಂಡಿತು.
ಶನಿವಾರ ಮೂಲ ದೇವರಿಗೆ ಹಾಗೂ ಗಣಪತಿ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಕಳಸ ಪ್ರತಿಷ್ಠಾಪನೆ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಭಾನುವಾರ ಬೆಳಗ್ಗೆ 7 ಗಂಟೆಗೆ ಚಂಡಿಕಾಯಾಗ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿದೆ. ಮಹಿಳೆಯರು ತಂಬಿಟ್ಟಿನ ಆರತಿ ತರಲಿದ್ದು, ಮಧ್ಯಾಹ್ನ 1 ರಿಂದ 4 ರವರೆಗೆ ಅನ್ನಸಂತರ್ಪಣೆ ನಡೆಯಲಿದೆ. ನಿಂಬೆಹಣ್ಣಿನ ದೀಪದ ಆರತಿ ಮತ್ತು ಉಯ್ಯಲೋತ್ಸವವನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದೆ.
ರಾತ್ರಿ 8.30 ಕ್ಕೆ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭಿಸಿ ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಈ ವೇಳೆ ತಿರುಪತಿ ತಿರುಮಲ ದೇವಸ್ಥಾನದ ಮಂಜು ಬಾಲಾಜಿ ಅವರ ವಾದ್ಯಗೋಷ್ಠಿ, ಮಂಗಳೂರಿನ ಯಕ್ಷಗಾನ, ಕೇರಳದ ಚಂಡೆ ಮೇಳ, ತಮಿಳುನಾಡಿನ ಬ್ಯಾಂಡ್ ಸೆಟ್ ಸೇರಿದಂತೆ ಮದ್ದೂರಮ್ಮ ಪೂಜಾ ಕುಣಿತ, ದಂಡಿನಮಾರಮ್ಮನವರ ಪೂಜಾ ಕುಣಿತ, ಕಲಾವಿದರಿಂದ ತಮಟೆ, ನಗಾರಿ, ಜಾನಪದ ಮೇಳ ಪ್ರಾಕಾರಗಳು ಮೆರವಣಿಗೆಯಲ್ಲಿ ಸಾಗಲಿವೆ.
ರಾತ್ರಿಇಡೀ ಪಟ್ಟಣದ ಹೊಳೆ ಬೀದಿ, ಒಕ್ಕಲಿಗರ ಬೀದಿ, ಸೋಮೇಗೌಡರ ಬೀದಿ, ಪೇಟೆ ಬೀದಿ, ದೊಡ್ಡಿ ಬೀದಿ, ಮೇಗಳ ಬೀದಿ, ಗಂಗಾಮತಸ್ಥರ ಬೀದಿ ಸೇರಿದಂತೆ ಹಲವು ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಸಾಗಿ ಸೋಮವಾರ ಬೆಳಗ್ಗೆ 6 ಗಂಟೆಗೆ ದೇವಸ್ಥಾನದ ಮೂಲಸ್ಥಾನ ತಲುಪಲಿದೆ ಎಂದು ದೇವಸ್ಥಾನದ ಕಾರ್ಯದರ್ಶಿ ಶ್ರೀನಿವಾಸ್ ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಪೇಟೆಬೀದಿಯಿಂದ ಹೊಳೆ ಬೀದಿಯಲ್ಲಿರುವ ಯಲ್ಲಮ್ಮ ದೇವಸ್ಥಾನದವರೆಗೆ ವಿದ್ಯುತ್ ದೀಪಾಲಂಕಾರ, ಮಹಾದ್ವಾರಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ.