ನ್ಯೂಸ್

ರೇಣುಕಸ್ವಾಮಿಯ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಲಿ: ಬಿ.ವೈ.ವಿಜಯೇಂದ್ರ

ಚಿತ್ರದುರ್ಗ: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳಿರುವುದು ಜಗಜ್ಜಾಹೀರವಾಗಿದೆ. ಹೆಚ್ಚಿನ ತನಿಖೆ ಮೂಲಕ ತಪ್ಪೆಸಗಿರುವ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ರೇಣುಕಸ್ವಾಮಿ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಇಷ್ಟೊಂದು ಬರ್ಬರವಾಗಿ ಹತ್ಯೆಗೈದಿರುವುದು ರಾಜ್ಯವಷ್ಟೇ ಅಲ್ಲ, ದೇಶವೇ ಅತ್ಯುಗ್ರವಾಗಿ ಖಂಡಿಸುವಂತದ್ದು. ಈ ಕುರಿತು ರಾಷ್ಟ್ರದೆಲ್ಲೆಡೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಇದರಲ್ಲಿ ರಾಜಕೀಯ ಬೆರೆಸಲು ಇಷ್ಟ ಪಡುವುದಿಲ್ಲ. ಯಾವ ಕಾರಣಕ್ಕೂ ತನಿಖೆ ಮೇಲೆ ಒತ್ತಡ ಹೇರದೆ, ಯಾರ ಮುಲಾಜಿಗೂ ಒಳಗಾಗದೆ, ಸಡಿಲಗೊಳಿಸದೆ, ನ್ಯಾಯಯುತವಾಗಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಇದೊಂದು ಅತ್ಯಂತ ಅಮಾನವೀಯ ಕೃತ್ಯ. ನಾಗರಿಕ ಸಮಾಜದ ಯಾರೂ ಬೆಂಬಲಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಖಂಡಿಸುವ ದುರ್ಘಟನೆ ಎಂದು ಆಕ್ರೋಶ ಹೊರಹಾಕಿದರು.

ರೇಣುಕಸ್ವಾಮಿ ತಂದೆ-ತಾಯಿಯನ್ನು ನೋಡಿದರೆ, ಅತೀ ದುಃಖವಾಗುತ್ತಿದೆ. ಯಾವ ರೀತಿ ಧೈರ್ಯ, ಸಾಂತ್ವಾನ ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದರು.

ಸಂಸದ ಗೋವಿಂದ ಎಂ ಕಾರಜೋಳ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ತಿಪ್ಪೇಸ್ವಾಮಿ, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಮುಖಂಡರಾದ ಜಿ.ಎಸ್.ಅನಿತ್‌ಕುಮಾರ್‌, ಸುರೇಶ್‌ ಸಿದ್ದಾಪುರ, ಕೆ.ಟಿ.ಕುಮಾರಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಎ.ಮುರುಳಿ, ಮಧುಗಿರಿ ಅಧ್ಯಕ್ಷ ಹನುಂತೇಗೌಡ, ಮಾಧುರಿ ಗಿರೀಶ್‌, ನಗರಸಭೆ ಸದಸ್ಯ ಸೊಪ್ಪು ಸುರೇಶ್‌ ಇತರರರಿದ್ದರು.