ನ್ಯೂಸ್

ರೇಣುಕಸ್ವಾಮಿ ಸಾವು ಚಿತ್ರರಂಗಕ್ಕೂ ನೋವು

ಚಿತ್ರದುರ್ಗ: ರೇಣುಕಸ್ವಾಮಿ ಅವರನ್ನು ಕಳೆದುಕೊಂಡ ತಂದೆ-ತಾಯಿ, ಪತ್ನಿ ನೋಡಿ ತುಂಬಾ ನೋವುಂಟಾಗಿದೆ. ಇದಕ್ಕೆ ಚಿತ್ರರಂಗವೂ ಹೊರತಾಗಿಲ್ಲ. ಕುಟುಂಬಕ್ಕೆ ಸಾಂತ್ವಾನ ಹೇಳಲು ಬಂದಿದ್ದೇವೆ. ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಆಗಿರುವ ತಪ್ಪಿಗೆ ಕ್ಷಮೆಯಾಚಿಸಿದ್ದೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ.ಸುರೇಶ್‌ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಇಂತಹ ವಾತಾವರಣ ಸೃಷ್ಟಿಯಾಗಿರುವುದು ಇದೇ ಮೊದಲು. ತಪ್ಪು ಯಾರಿಂದಲೇ ಆಗಿದ್ದರೂ ಮಂಡಳಿಯಿಂದ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದರು.

ಯಾರದಾದರೂ ಪ್ರಾಣವೇ: ಯಾರದಾದರೂ ಪ್ರಾಣವೇ. ಖಂಡಿಸುವ ಕೆಲಸ ಮಾಡಿದ್ದೇವೆ. ಉನ್ನತ ಸ್ಥಾನದಲ್ಲಿದ್ದಾಗ ಜವಾಬ್ದಾರಿ ಇರಬೇಕಿತ್ತು. ನಮಗೂ ಸಹೋದರ-ಸಹೋದರಿಯರು ಇದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಚೋದನೆಗೆ ಒಳಗಾಗಬಾರದು: ಮೇರು ನಟರಾದ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್ ಅವರೂ ಬಹುದೊಡ್ಡ ಅಭಿಮಾನಿ ಬಳಗ ಹೊಂದಿದ್ದವರು. ಅವರೆಲ್ಲರನ್ನು ನಾಡಿನ ಜನ ಅನುಸರಿಸಿದ್ದರು. ಆದರೆ, ಇತ್ತೀಚೆಗೆ ಫ್ಯಾನ್ಸ್‌ಗಳು ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ಸಂಯಮ ಮೀರದೆ, ಸೌಜನ್ಯದಿಂದ ವರ್ತಿಸಲು ಈಗಿನ ನಟರೇ ಸಂದೇಶ ರವಾನಿಸಬೇಕು ಎಂದು ಮನವಿ ಮಾಡಿದರು.

ಚಿತ್ರರಂಗ ಈಗಾಗಲೇ ಸಾಯ್ತ ಇದೆ: ಕನ್ನಡ ಚಿತ್ರರಂಗ ನಂಬಿ ಸಾವಿರಾರು ಮಂದಿ ಜೀವನ ನಡೆಸುತ್ತಿದ್ದಾರೆ. ಕೆಟ್ಟದಾಗಿ ಬಿಂಬಿಸಿದರೆ, ಚಿತ್ರಮಂದಿರಗಳಿಗೆ ಯಾರೂ ಬರುವುದಿಲ್ಲ. ಕೋವಿಡ್ ವೇಳೆ ಸಂಕಷ್ಟ ಎದುರಿಸಿದ್ದೇವೆ. ಚಿತ್ರರಂಗ ಈಗಾಗಲೇ ಸಾಯ್ತ ಇದೆ. ಯಾರೋ ಒಬ್ಬರ ಕಾರಣಕ್ಕೆ ಅದನ್ನು ಮುಳುಗಿಸಲು ಸಾಧ್ಯವಿಲ್ಲ. ಈ ಕುರಿತು ಯೋಚಿಸಬೇಕಿದೆ. ಅದನ್ನು ಉಳಿಸುವ ಕೆಲಸ ಆಗಬೇಕು ಎಂದರು.

ಪ್ರತಿ ಮನುಷ್ಯನಿಗೆ ಧರ್ಮ, ಕರ್ತವ್ಯ, ಮಾನವೀಯ ಮೌಲ್ಯ ಮುಖ್ಯ. ಅದನ್ನು ಯಾರೂ ಎಂದಿಗೂ ಮರೆಯಬಾರದು ಎಂದರು.

ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್‌, ನಿರ್ಮಾಪಕರಾದ ಚಿನ್ನೇಗೌಡ, ಜಯಸಿಂಹ ಮುಸೂರಿ ಇತರರಿದ್ದರು.