ಚಿತ್ರದುರ್ಗ: ಬೆಂಗಳೂರಿನಲ್ಲಿ ಭೀಕರವಾಗಿ ಕೊಲೆಯಾದ ಚಿತ್ರದುರ್ಗದ ರೇಣುಕಸ್ವಾಮಿ ಪತ್ನಿ ಸಹನಾ ಬುಧವಾರ
ಗಂಡು ಮಗುವಿಗೆ ಜನನ ನೀಡಿದ್ದಾರೆ.
ನಗರದ ಜೆಸಿಆರ್ ಬಡಾವಣೆಯ ಕೀರ್ತಿ ಆಸ್ಪತ್ರೆಯಲ್ಲಿ ಬೆಳಗ್ಗೆ 6.56ಕ್ಕೆ ನಾರ್ಮಲ್ (ಸಾಮಾನ್ಯ) ಹೆರಿಗೆಯಾಗಿದ್ದು, ನಿಗದಿತ ದಿನಾಂಕಕ್ಕಿಂತ ಒಂದು ವಾರ ಮೊದಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮಗು 2 ಕೆ.ಜಿ 215 ಗ್ರಾಂ ತೂಕವಿದ್ದು, ಉಸಿರಾಟ ಸೇರಿ ಆರೋಗ್ಯವಾಗಿದೆ. ಆದರೂ ಸ್ವಲ್ಪ ತೂಕ ಕಡಿಮೆ ಹಿನ್ನಲೆಯಲ್ಲಿ ವೈದ್ಯರ ನಿಗಾ (ಅಬ್ಜರ್ವೆಷನ್) ದಲ್ಲಿ ಇಡಲಾಗಿದೆ.
ಕುಟುಂಬಸ್ಥರಲ್ಲಿ ಸಂಭ್ರಮ: ಗಂಡು ಮಗು ಜನನದ ವಿಷಯ ತಿಳಿದು ರೇಣುಕಸ್ವಾಮಿ ತಂದೆ ಕಾಶೀನಾಥಯ್ಯ ಶಿವನಗೌಡ್ರು, ಪುತ್ರ ಶೋಕದ ಬಳಿಕ ಮೊದಲ ಬಾರಿಗೆ ನಗು ಬೀರಿದರು.
ನನ್ನ ಪುತ್ರನೇ ಜನಿಸಿದಷ್ಟು ಸಂತೋಷ: ನನ್ನ ಪುತ್ರನೇ ಮತ್ತೊಮ್ಮೆ ಜನಿಸಿದಷ್ಟು ಸಂತೋಷ ಉಂಟಾಗಿದ್ದು, ತಾತನಾಗುವ ಸೌಭಾಗ್ಯ ದೊರೆತಿದೆ ಎಂದು ಸುದ್ದಿಗಾರರಿಗೆ ಕಾಶಿನಾಥಯ್ಯ ಹೇಳಿದರು.
ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತುಂಬಾ ಕಾಳಜಿ ವಹಿಸಿದ್ದು, ಅದಕ್ಕೆ ನಾನೂ ಚಿರರುಣಿಯಾಗಿದ್ದೇನೆ ಎಂದರು.
ಪುತ್ರ ರೇಣುಕಸ್ವಾಮಿ ನೆನೆದು ಭಾವುಕರಾಗಿ ಕಾಶಿನಾಥಯ್ಯ ಕಣ್ಣೀರು ಹಾಕಿದರು.