ನ್ಯೂಸ್

ರೇಣುಕಸ್ವಾಮಿ ಕುಟುಂಬಕ್ಕೆ ಶ್ರವಣಕುಮಾರನ ಪರಿಸ್ಥಿತಿ

ಚಿತ್ರದುರ್ಗ: ರಾಮಾಯಣದಲ್ಲಿ ಶ್ರವಣಕುಮಾರನ ತಂದೆ-ತಾಯಿಗೆ ಯಾವ ರೀತಿ ಪರಿಸ್ಥಿತಿ ಬರುತ್ತದೆಯೋ ಅದೇ ರೀತಿ ಕೊಲೆ ಪ್ರಕರಣದಲ್ಲಿ ರೇಣುಕಸ್ವಾಮಿ ಪಾಲಕರಿಗೆ ಉಂಟಾಗಿದೆ ಎಂದು ಮೈಸೂರಿನ ಬೆಳ್ಳಿ ಮತ್ತು ಬಂಗಾರ ವರ್ತಕರ ಸಂಘದ ಬಿ.ರವಿಪ್ರಕಾಶ್ ವಿಷಾದಿಸಿದರು.

ರೇಣುಕಸ್ವಾಮಿ ಮನೆಗೆ ಶನಿವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕುಟುಂಬಕ್ಕೆ ತುಂಬಾ ಅನ್ಯಾಯವಾಗಿದೆ. 60 ಸಾವಿರ ರೂ. ಪರಿಹಾರದ ಚೆಕ್ ವಿತರಿಸಿದ್ದೇವೆ. ಇದನ್ನೇ ಮಾದರಿಯಾಗಿಸಿಕೊಂಡು ಉಳಿದವರಿಂದಲೂ ನೊಂದ ಫ್ಯಾಮಿಲಿಗೆ ನೆರವಿನ ಮಹಾಪೂರ ಹರಿದುಬರಲಿ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದರು.

ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಅಧ್ಯಕ್ಷ ಮಹೇಶ್ ಮಾತನಾಡಿ, ಕುಟುಂಬವೀಗ ನೋವಿನಲ್ಲಿದ್ದು, ಅದರಿಂದ ಹೊರಗೆ ಬರಲಿ ಎಂಬ ಉದ್ದೇಶದಿಂದಾಗಿ ಧೈರ್ಯ ತುಂಬಲು ಬಂದಿದ್ದೇವೆ ಎಂದು ಹೇಳಿದರು.

ಯಾರೇ ಆಗಲಿ ಮಾನವೀಯತೆ ಮೆರೆಯದೆ, ಕ್ರೌರ್ಯ ಎಸಗಿರುವವರಿಗೆ ಶಿಕ್ಷೆಯಾಗಲಿ. ಈ ನೆಲದ ಕಾನೂನು ಗಟ್ಟಿಯಾಗಿದೆ. ಪೊಲೀಸರ ತನಿಖೆ ಮೇಲೂ, ನ್ಯಾಯದೇವತೆ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಕುರಿತು ವಿಶ್ವಾಸವಿದೆ ಎಂದರು.

ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ, ತಾಯಿ ರತ್ನಪ್ರಭಾ, ಪತ್ನಿ ಸಹನಾ, ಸಂಘದ ಪದಾಧಿಕಾರಿಗಳಾದ ಲಯನ್ ಗೋಲ್ಡ್ ಸುರೇಶ್, ರಾಘವೇಂದ್ರ ಶೇಟ್, ಡೈಮಂಡ್ ಗುರು ಇತರರಿದ್ದರು.