ಚಿತ್ರದುರ್ಗ: ಬೆಂಗಳೂರಿನಲ್ಲಿ ಭೀಕರವಾಗಿ ಕೊಲೆಯಾದ ಚಿತ್ರದುರ್ಗದ ರೇಣುಕಸ್ವಾಮಿ ಕುಟುಂಬಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಾಂಕೇತಿಕವಾಗಿ 5 ಲಕ್ಷ ರೂ. ಪರಿಹಾರ ನೀಡಿದೆ.
ಶನಿವಾರ ಮೃತ ರೇಣುಕಸ್ವಾಮಿ ಮನೆಗೆ ಭೇಟಿ ನೀಡಿದ ಮಂಡಳಿ ಪದಾಧಿಕಾರಿಗಳು, ಕಲಾವಿದರು ಪಾಲಕರಿಗೆ, ಪತ್ನಿಗೆ ಪ್ರತ್ಯೇಕವಾಗಿ ತಲಾ 2.5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಸಾಂತ್ವಾನ ಹೇಳಿದರು.
ಸುದ್ದಿಗಾರರೊಂದಿಗೆ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಮಾತನಾಡಿ, ಇದು ಸಾಂಕೇತಿಕವಷ್ಟೇ. ಶಾಶ್ವತ ಪರಿಹಾರಕ್ಕೂ ನಿರ್ಧಾರ ಕೈಗೊಳ್ಳಲಾಗುವುದು. ನಿರಂತರವಾಗಿ ಕುಟುಂಬದ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.
ಚಾರ್ಜ್‌ಶೀಟ್ ಬಳಿಕವೇ ನಿರ್ಧಾರ: ನ್ಯಾಯಾಲಯಕ್ಕೆ ದರ್ಶನ್ ವಿರುದ್ಧ ಇನ್ನೂ ದೋಷಾರೋಪ ಸಲ್ಲಿಕೆಯಾಗಿಲ್ಲ. ಆದಾದ ಬಳಿಕವೇ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.
ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರ ತನಿಖೆ ನಡೆಯುತ್ತಿದ್ದು, ಪ್ರಾಮಾಣಿಕವಾಗಿ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ವಿಶ್ವಾಸವಿದೆ. ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು ಎಂದರು.
ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್, ನಿರ್ಮಾಪಕರಾದ ಚಿನ್ನೇಗೌಡ, ಜಯಸಿಂಹ ಮುಸೂರಿ ಇತರರಿದ್ದರು.