ನ್ಯೂಸ್

ರೆಪೊ ದರ ಸ್ಥಿರ, ಹಣದುಬ್ಬರ ಮತ್ತಷ್ಟು ಏರಿಕೆ ನಿರೀಕ್ಷೆ; ಆರ್​ಬಿಐ ಹಣಕಾಸು ನೀತಿ ಪರಾಮರ್ಶೆ ಸಭೆ

ನವದೆಹಲಿ: ಜಾಗತಿಕ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನ ಕಾರಣ ಹಣದುಬ್ಬರ ಪ್ರಮಾಣ, ಜಿಡಿಪಿ ಬೆಳವಣಿಗೆ ಮುನ್ನೋಟವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಪರಿಷ್ಕರಿಸಿದೆ. ಇದೇ ವೇಳೆ, ರೆಪೋ ದರವನ್ನು ಸ್ಥಿರವಾಗಿ ಇರಿಸುವ ತೀರ್ಮಾನ ಪ್ರಕಟಿಸಿದೆ. ಆರ್​ಬಿಐನ ಹಣಕಾಸು ನೀತಿ ಸಮಿತಿ ಶುಕ್ರವಾರ ಸಭೆ ನಡೆಸಿದ್ದು, ರೆಪೋ ದರವನ್ನು ಶೇಕಡ 4ರ ದರದಲ್ಲಿ ಸ್ಥಿರವಾಗಿ ಇಡುವುದಕ್ಕೆ ಅವಿರೋಧವಾಗಿ ನಿರ್ಣಯ ಕೈಗೊಳ್ಳಲಾಗಿದೆ. ಇದಲ್ಲದೆ, ಹಣದುಬ್ಬರ ಮುನ್ನೋಟ ಈ ಹಿಂದಿನ ಶೇಕಡ 4.5ರಿಂದ ಶೇಕಡ 5.7ಕ್ಕೆ ಏರಿಸಲಾಗಿದೆ. ಜಿಡಿಪಿ ಮುನ್ನೋಟವನ್ನು ಈ ಹಿಂದಿನ ಶೇಕಡ 7.8ರಿಂದ ಶೇಕಡ 7.2ಕ್ಕೆ ಇಳಿಸಲಾಗಿದೆ.

ಸೈಬರ್ ಭದ್ರತೆ ಮಾರ್ಗಸೂಚಿ: ಸೈಬರ್ ರಿಸಿಲಿಯನ್ಸ್ ಆಂಡ್ ಪೇಮೆಂಟ್ ಸೆಕ್ಯುರಿಟಿ ಕಂಟ್ರೋಲ್ ಫಾರ್ ಪೇಮೆಂಟ್ ಸಿಸ್ಟಮ್ ಆಪರೇಟರ್ಸ್ ಕುರಿತ ಮಾರ್ಗಸೂಚಿಯನ್ನು ಆರ್​ಬಿಐ ಶುಕ್ರವಾರ ಪ್ರಕಟಿಸಿದೆ. ಸೈಬರ್ ವಂಚನೆ ತಡೆಯುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮವಾಗಿದೆ.

ಹೋಮ್ ಲೋನ್ ಲಿಂಕ್: ಹೊಸ ಗೃಹ ಸಾಲಗಳಿಗೆ ಲೋನ್-ಟು-ವ್ಯಾಲ್ಯೂ (ಔಖ್ಖ) ಅನುಪಾತಗಳೊಂದಿಗೆ ಮಾತ್ರ ಗೃಹ ಸಾಲಗಳನ್ನು ಲಿಂಕ್ ಮಾಡುವುದನ್ನು 2023 ರ ಮಾರ್ಚ್ 31 ರವರೆಗೆ ಮುಂದುವರಿಸುವುದಾಗಿ ಮತ್ತು ಅಪಾಯದ ತೂಕವನ್ನು ತರ್ಕಬದ್ಧ ಗೊಳಿಸುವುದಾಗಿ ಆರ್​ಬಿಐ ಹೇಳಿದೆ. ಈ ಕ್ರಮವು ಈ ಸಾಲಗಳನ್ನು ಅಗ್ಗವಾಗಿಸುವ ನಿರೀಕ್ಷೆ ಇದೆ.

ಪ್ರಮುಖ ಪಾಲಿಸಿ ದರಗಳು ಸ್ಥಿರ: ಸತತ ಹನ್ನೊಂದನೇ ಬಾರಿಗೆ ರೆಪೋ ದರವನ್ನು ಶೇಕಡ 4ರ ದರದಲ್ಲೇ ಸ್ಥಿರವಾಗಿ ಇರಿಸಲಾಗಿದೆ. ಬೆಳವಣಿಗೆಗೆ ಅನುಕೂಲವಾಗುವಂತೆ ಹಣದುಬ್ಬರ ನಿಯಂತ್ರಿಸಲು ರೆಪೊ ದರ ಪರಿಷ್ಕರಣೆಗೆ ಅವಕಾಶ ಇರುವಂತೆಯೂ ನೋಡಿಕೊಳ್ಳಲಾಗಿದೆ. ಲಿಕ್ವಿಡಿಟಿ ಅಡ್ಜಸ್ಟ್ ಮೆಂಟ್ ಫೆಸಿಲಿಟಿ (ಎಲ್​ಎಎಫ್) ಕಾರಿಡಾರ್ ಅನ್ನು 50 ಮೂಲಾಂಶಗಳ ನೆಲೆಯಲ್ಲಿ ಪುನಸ್ಥಾಪಿಸಲಾಗಿದೆ. ಹೊಸದಾಗಿ ಸ್ಥಾಪಿಸಲಾದ ಸ್ಟಾ್ಯಂಡಿಂಗ್ ಡೆಪಾಸಿಟ್ ಫೆಸಿಲಿಟಿ (ಎಸ್​ಡಿಎಫ್) ಮೂಲಕ ರೆಪೊ ದರ 25 ಮೂಲಾಂಶ ಕಡಿಮೆ ಅಂದರೆ ಶೇಕಡ 3.75 ರ ದರದಲ್ಲಿ ಲಭ್ಯವಾಗಲಿದೆ. ರಿವರ್ಸ್ ರೆಪೋ ದರ ಶೇಕಡ 3.35ರಲ್ಲಿ ಸ್ಥಿರವಾಗಿದೆ.

ಜಿಡಿಪಿ ಮುನ್ನೋಟ ಇಳಿಕೆ: ಪ್ರಸಕ್ತ ಹಣಕಾಸು ವರ್ಷ 2022-23ರ ಜಿಡಿಪಿ ಮುನ್ನೋಟವನ್ನು ಈ ಹಿಂದಿನ ಶೇಕಡ 7.8ರಿಂದ ಶೇಕಡ 7.2ಕ್ಕೆ ಇಳಿಸಲಾಗಿದೆ. 2023ರ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿಯು ಮೊದಲ ತ್ರೖೆಮಾಸಿಕದಲ್ಲಿ ಶೇಕಡ 16.2, ಎರಡನೇಯದರಲ್ಲಿ ಶೇಕಡ 6.2, ಮೂರನೇಯದರಲ್ಲಿ ಶೇಕಡ 4.1 ಮತ್ತು ನಾಲ್ಕನೇಯದರಲ್ಲಿ ಶೇಕಡ 4 ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬೆಳವಣಿಗೆ ದರವನ್ನು ನಿಗದಿ ಮಾಡುವಾಗ ಪ್ರಸಕ್ತ ಕಚ್ಚಾತೈಲ ದರ ಪ್ರತಿ ಬ್ಯಾರೆಲ್​ಗೆ 100 ಡಾಲರ್ ಎಂದು ಪರಿಗಣಿಸಲಾಗಿದೆ.

ಬಿಬಿಪಿಎಸ್​ಗೆ ಉತ್ತೇಜನ: ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್​ಬಿಬಿಪಿಎಸ್) ಸೌಲಭ್ಯ ಬಳಸುವ ಸಂಸ್ಥೆಗಳ ಅರ್ಹತಾ ಮಾನದಂಡವನ್ನು ಈಗಿರುವ 100 ಕೋಟಿ ರೂ.ನಿಂದ 25 ಕೋಟಿ ರೂಪಾಯಿಗೆ ಇಳಿಸಲಾಗಿದೆ. ಈ ಮೂಲಕ ಬಿಬಿಪಿಎಸ್ ವಿಸ್ತರಣೆಗೆ ಉತ್ತೇಜನ ನೀಡಲಾಗಿದೆ.

ಸೆನ್ಸೆಕ್ಸ್ 412 ಅಂಶ ಏರಿಕೆ: ಆರ್​ಬಿಐ ನೀತಿ ಪ್ರಕಟವಾಗುತ್ತಿದ್ದಂತೆ ಭಾರತೀಯ ಷೇರುಪೇಟೆಯಲ್ಲಿ ಸಂಚಲನ ಮೂಡಿತು. ಬಿಎಸ್​ಇ ಸೆನ್ಸೆಕ್ಸ್ 412.23 ಅಂಶ (0.70%) ಏರಿ 59,447.18 ಅಂಶ, ಎನ್​ಎಸ್​ಇ ನಿಫ್ಟಿ 144.80 ಅಂಶ (0.82%) ಏರಿ 17,784.35 ಅಂಶ ತಲುಪಿದೆ.