ನ್ಯೂಸ್

ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕ್ಕೆ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಮೆಚ್ಚುಗೆ

ಹಾಸನ: ಮನುಷ್ಯನಿಗೆ ಅಗತ್ಯವಾಗಿ ಬೇಕಾದ ರಕ್ತ ಕೊಡಿಸುವಲ್ಲಿ ರೆಡ್ ಕ್ರಾಸ್ ವಹಿಸುವ ಜವಾಬ್ದಾರಿ ಮಹತ್ವದ್ದಾಗಿದ್ದು ರಕ್ತ ಕೊರತೆಯಿಂದ ಯಾರೂ ಸಾಯಬಾರದು ಎಂಬ ನಿಟ್ಟಿನಲ್ಲಿ ರೆಡ್ ಕ್ರಾಸ್ ಪದಾಧಿಕಾರಿಗಳು ಮಾಡುವ ಕೆಲಸವನ್ನು ಕಣ್ಣಾರೆ ಕಂಡಿದ್ದೇನೆಂದು ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಅವರು ಹೇಳಿದರು.
ನಗರದ ಸಾಲಗಾಮೆ ರಸ್ತೆಯಲ್ಲಿರುವ ಭಾರತೀಯ ರೆಡ್ ಕ್ರಾಸ್ ಕಚೇರಿಯಲ್ಲಿ ರೆಡ್ ಕ್ರಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ರಕ್ತದ ಕೊರತೆ ಹೆಚ್ಚಿತ್ತು. ಪರಸ್ಪರ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡಲು ಆಗದ ಸಂದರ್ಭದಲ್ಲಿ ರೆಡ್ ಕ್ರಾಸ್ ಪ್ರಾಣದ ಹಂಗು ತೊರೆದು ಕೆಲಸ ಮಾಡಿದೆ ಎಂದರು.
ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದರೂ ರಕ್ತಕ್ಕೆ ಪರ್ಯಾಯ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದ್ದರಿಂದ ಆರೋಗ್ಯವಂತರು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು. ಒಬ್ಬರು ರಕ್ತದಾನ ಮಾಡಿದರೆ ಮೂರು ಜನರ ಪ್ರಾಣ ಉಳಿಸಬಹುದು. ರಕ್ತದಾನ ಮಾಡುವುದರಿಂದ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆಂಬ ತಪ್ಪು ಕಲ್ಪನೆಯಿಂದ ಹೊರಬರಬೇಕು ಎಂದು ಸಲಹೆ ನೀಡಿದರು.
ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಎಚ್.ಪಿ.ಮೋಹನ್ ಅವರು ಮಾತನಾಡಿ, ವಿಶ್ವದಾದ್ಯಂತ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರಕ್ತದಾನಕ್ಕೆ ಪ್ರೋತ್ಸಾಹಿಸಲು ಅಂತರಾಷ್ಟ್ರೀಯ ರಕ್ತದಾನ ದಿನ ಆಚರಿಸಲಾಗುತ್ತದೆ. ಅದರಂತೆ ಪ್ರತಿ ವರ್ಷವು ಸಹ ಜಿಲ್ಲಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳಲ್ಲಿ ಯುತ್ ರೆಡ್ ಕ್ರಾಸ್ ಘಟಕ ಆರಂಭಿಸಲಾಗಿದೆ ಎಂದರು.
ಜಿಲ್ಲಾ ಏಡ್ಸ್‌ಮತ್ತು ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಸಂಧ್ಯಾ ಅವರು ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ಬೇಡಿಕೆ ಸಾಕಷ್ಟಿದೆ. ಪ್ರತಿ ತಿಂಗಳಿಗೆ 1800 ಯೂನಿಟ್ ರಕ್ತದ ಬೇಡಿಕೆಯಿದೆ. ಆದರೆ ನಮಗೆ ಲಭ್ಯವಾಗುತ್ತಿರುವುದು ಕೇವಲ 900 ರಿಂದ 1000 ಯೂನಿಟ್ ಮಾತ್ರ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಅದಲ್ಲದೆ ಜಿಲ್ಲೆಯಲ್ಲಿನ ರಕ್ತದ ಕೊರತೆಯನ್ನ ನೀಗಿಸಲು ಆರೋಗ್ಯ ಇಲಾಖೆಯಿಂದ ಮಾತ್ರ ಸಾದ್ಯವಿಲ್ಲ. ಶೇ. 10 ರಷ್ಟು ಜನರು ರಕ್ತದಾನ ಮಾಡಿದರೆ ಸಮಸ್ಯೆ ನೀಗುತ್ತದೆಂದರು.
18 ವರ್ಷ ಮೇಲ್ಪಟ್ಟ, 45 ಕೆ.ಜಿ.ಗಿಂತ ಅಧಿಕ ತೂಕ ಹೊಂದಿರುವ ಆರೋಗ್ಯವಂತ ಮಹಿಳೆ ಹಾಗು ಪುರುಷರು ಧಾರಾಳವಾಗಿ ರಕ್ತದಾನ ಮಾಡಬಹುದು. ಪುರುಷರು ಪ್ರತಿ 3 ತಿಂಗಳಿಗೊಮ್ಮೆ, ಹೆಣ್ಣು ಮಕ್ಕಳು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಯಾವುದೆ ಭಯವಿಲ್ಲದೆ ನಿರ್ಭಿತರಾಗಿ ರಕ್ತದಾನ ಮಾಡಿ ಜೀವದಾನಿಗಳಾಗಿ ಎಂದು ಕರೆ ನೀಡಿದರು.
ಸೆಂಟ್ರಲ್ ಕಾಮರ್ಸ್ ಕಾಲೇಜಿನ ಪ್ರಾಂಶುಪಾಲ ಮಹೇಶ್ ಮತ್ತು ಸಾಹಿತಿ ಚಂದ್ರಕಾಂತ್ ಪಡೆಸೂರ್ ಮಾತನಾಡಿದರು. 35ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ರೆಡ್ ಕ್ರಾಸ್‌ನ ಪ್ರಕಾಶ್, ಸೌಟ್ಸ್ ಮತ್ತು ಗೈಡ್ಸ್‌ನ ಕುಮಾರಸ್ವಾಮಿ, ವಿದ್ಯಾರ್ಥಿ ಚಂದನ್ ಅವರನ್ನು ಸನ್ಮಾನಿಸಲಾಯಿತು. 80 ಜನ ರಕ್ತದಾನ ಮಾಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಜಯೇಂದ್ರಕುಮಾರ್, ಶಬೀರ್ ಅಹಮದ್, ಜಯಪ್ರಕಾಶ್, ಕೆ.ಟಿ ಜಯಶ್ರೀ, ಡಾ.ಕಾವ್ಯಶ್ರೀ, ಬಿ.ಆರ್.ಉದಯ್ ಕುಮಾರ್, ಅಮ್ಜದ್ ಖಾನ್ ಹಾಗು ಇತರರಿದ್ದರು.