ಪುರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ, ಜಿ.ಪ್ರಕಾಶ್, ಸದಸ್ಯರಾದ ಬಿ.ಆರ್.ಮೋಹನ್ ಕುಮಾರ್ ಇದ್ದರು. 
ನ್ಯೂಸ್

ರುದ್ರಭೂಮಿಯಲ್ಲಿ ಸ್ವಚ್ಛತೆ ಕಾಪಾಡಿ

ಬೀರೂರು: ಪಟ್ಟಣದ ಮಹಾನವಮಿ ಬಯಲಿನಲ್ಲಿರುವ ಹಿಂದು ರುದ್ರಭೂಮಿಯಲ್ಲಿ ಸ್ವಚ್ಛತೆ ಹಾಗೂ ನೆರಳು ಕಲ್ಪಿಸಬೇಕು ಎಂದು ಕಾಂಗ್ರೆಸ್ ಮುಖಂಡ ವಿನಾಯಕ್ ಒತ್ತಾಯಿಸಿದರು.

ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ 2025-26ನೇ ಸಾಲಿನ 2ನೇ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಲಿಂಗದಹಳ್ಳಿ ರಸ್ತೆಯ ರೈಲ್ವೆ ಸೇತುವೆ ಕೆಳಭಾಗದಲ್ಲಿ ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳುವುದು, ದೇವಾಲಯಗಳ ಸಮೀಪ ದೀಪಗಳ ಅಳವಡಿಸುವಿಕೆ, ಕರಗಲ್ ಬೀದಿಯ ರಸ್ತೆ ದುರಸ್ತಿ ಸೇರಿದಂತೆ ಹಲವು ಸಮಸ್ಯೆ ಪರಿಹಾರಕ್ಕೆ ಬಜೆಟ್‌ನಲ್ಲಿ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಮುಖಂಡ ಬಿ.ಎಂ.ರುದ್ರಪ್ಪ ಮಾತನಾಡಿ, ಹಿಂದಿನ ವರ್ಷಗಳಲ್ಲಿ ವಿವಿಧ ಯೋಜನೆಯಡಿ ಮಂಜೂರಾಗಿರುವ ಮತ್ತು ಬಿಡುಗಡೆಯಾಗಿರುವ ಅನುದಾನಗಳ ಬಳಕೆ ಮತ್ತು ಪ್ರಗತಿ ಪರಿಶೀಲನೆ ಕುರಿತಂತೆ ಮಾಹಿತಿ ನೀಡುವಂತೆ ಒತ್ತಾಯಿಸಿದರು. ಕಳೆದ ಬಾರಿಯ ಬಜೆಟ್‌ನ ಬಗ್ಗೆ ವರದಿ ನೀಡಿದರೆ ಇಂದಿನ ಬಜೆಟ್ ಕರಡು ಪ್ರತಿಯನ್ನು ಸಿದ್ಧಪಡಿಸಲು ಅನುಕೂಲವಾಗುತ್ತದೆ ಎಂದರು.

ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಸಮರ್ಪಕ ಪೂರೈಕೆ ಹಾಗೂ ಘನತ್ಯಾಜ್ಯ ಘಟಕದ ಆರಂಭಕ್ಕೆ ಅಗತ್ಯಕ್ರಮ, ನಾಮಘಲಕಗಳ ಅಳವಡಿಕೆ, ಸಂತೆ ಅಭಿವೃದ್ಧಿಗೆ ಹೆಚ್ಚಿನ ಹಣ ವ್ಯಯಿಸುವಂತೆ ಮನವಿ ಮಾಡಿದರು.

ಪುರಸಭೆ ಸದಸ್ಯ ಬಿ.ಆರ್.ಮೋಹನ್ ಕುಮಾರ್, ರಘು, ಮೀನಾಕ್ಷಮ್ಮ, ಸಹನಾ ವೆಂಕಟೇಶ್, ಮಾಣಿಕ್‌ಪಾಷಾ, ಶಾರದಾ, ಸುಮಿತ್ರಾ, ಮುಖಂಡರಾದ ಹರಿಪ್ರಸಾದ್, ಮುಬಾರಕ್, ಆರೋಗ್ಯಾಧಿಕಾರಿ ಲಕ್ಷ್ಮಣ್, ಪರಿಸರ ಅಭಿಯಿಂತರ ನೂರುದ್ದಿನ್, ಅಧಿಕಾರಿಗಳು ಇದ್ದರು.