ಸಾಗರ: ಸಂಗೀತ ಮಾನಸಿಕ ಒತ್ತಡ ನಿವಾರಣೆಗೆ ಸಹಕಾರಿ. ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಆಸಕ್ತಿ ಬೆಳೆಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರ ಟೌನ್ ಮಹಿಳಾ ಸಮಾಜದಲ್ಲಿ ಭಾನುವಾರ ಶಾರದಾ ಸಂಗೀತ ವಿದ್ಯಾಲಯದ 20ನೇ ವಾರ್ಷಿಕೋತ್ಸವ ಉದ್ಘಾಟಿಸಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಸಂಗೀತ ಪ್ರೋತ್ಸಾಹಿಸುವ ರಿಯಾಲಿಟಿ ಶೋ ಬಂದ ನಂತರ ಸಂಗೀತ ಕಲಿಯುವ ಮಕ್ಕಳ ಸಂಖ್ಯೆ ಅಧಿಕವಾಗುತ್ತಿದ್ದು ಸಂಗೀತ ಕಲಿಸುವ ವಿದ್ಯಾಲಯಗಳು ಸಹ ಹೆಚ್ಚುತ್ತಿವೆ. ಸಂಗೀತ ಕಲಿಯುವುದು ಕೇವಲ ಸ್ಪರ್ಧೆಗೆ ಎನ್ನುವ ಮನೋಭಾವ ಮಕ್ಕಳ ಮನಸ್ಸಿನಲ್ಲಿ ಬರಬಾರದು. ಸಂಗೀತ ಸಂಸ್ಕಾರವನ್ನು ಕಲಿಸುತ್ತದೆ. ಕಳೆದ 20 ವರ್ಷಗಳಿಂದ ಸಾಗರದಲ್ಲಿ ಸಂಗೀತ ಶಾಲೆಯನ್ನು ನಡೆಸಿ ಮಕ್ಕಳಿಗೆ ಸಂಗೀತಾಭ್ಯಾಸ ಮಾಡಿಸುತ್ತಿರುವ ಇಂತಹ ಸಂಸ್ಥೆಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಸಂಗೀತದ ಬಗ್ಗೆ ನನಗೆ ಆಸಕ್ತಿ ಮೂಡಲು ನನ್ನ ರಾಜಕೀಯ ಗುರು ಎಸ್.ಬಂಗಾರಪ್ಪ ಕಾರಣ. ಸಂಗೀತ ಕೇಳುವ ಜತೆಗೆ ಹಾಡನ್ನು ಹಾಡುವ ಕಲೆ ಬಂಗಾರಪ್ಪ ಅವರಿಗೆ ಸಿದ್ಧಿಸಿತ್ತು. ನಾನು ಸಹ ಅವರ ಶಿಷ್ಯನಾಗಿ ಸಂಗೀತವನ್ನು ಆಲಿಸುವ ಪರಿಪಾಠ ಬೆಳೆಸಿಕೊಂಡಿದ್ದೇನೆ. ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ ಅವರಲ್ಲಿ ಸಂಗೀತ, ಕ್ರೀಡೆ, ಸಾಹಿತ್ಯದ ಬಗ್ಗೆ ಪಾಲಕರು ಆಸಕ್ತಿ ಮೂಡಿಸಬೇಕು ಎಂದು ಹೇಳಿದರು.
ಮಹಿಳಾ ಸಮಾಜದ ಸರಸ್ವತಿ ನಾಗರಾಜ್ ಮಾತನಾಡಿ, ಸಂಗೀತ ಏಕಾಗ್ರತೆ ವೃದ್ಧಿಸುತ್ತದೆ. ಸಂಗೀತ ಕಲಿಕೆ ನಿರಂತರವಾಗಿರಬೇಕು. ವಿದ್ಯಾರ್ಥಿ ದೆಸೆಯಲ್ಲಿ ಕಲಿಯಲು ಸಿಗುವ ಎಲ್ಲ ಅವಕಾಶಗಳನ್ನು ಮಕ್ಕಳು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಅರುಣಕುಮಾರ್, ಗಣಪತಿ ಮಂಡಗಳಲೆ, ಕಲಸೆ ಚಂದ್ರಪ್ಪ, ಸೈಯದ್ ಜಾಕೀರ್, ಶ್ರೀಪತಿ ಹೆಗಡೆ, ಗೀತಾ ಸೋಮೇಶ್ ಇತರರಿದ್ದರು.