ಬೀರೂರು: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ಸಂಪೂರ್ಣ ಹದಗೆಟ್ಟಿದ್ದು ಮಹಾತ್ಮ ಗಾಂಧಿ ವೃತ್ತ ಸೇರಿದಂತೆ ರಸ್ತೆಯ ವಿವಿಧೆಡೆ ಗುಂಡಿಗಳು ಬಿದ್ದಿದೆ. ಗುಂಡಿಮಯವಾದ ರಸ್ತೆ ಸಂಚಾರಕ್ಕೆ ಸಂಚಕಾರ ತರುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಗಮನಹರಿಸುತ್ತಿಲ್ಲ ಎಂಬುದು ನಾಗರಿಕರ ಆರೋಪ.
ಈ ರಸ್ತೆ ಮೊದಲೇ ಗುಂಡಿಮಯವಾಗಿತ್ತು. ಹೋಬಳಿಯಾದ್ಯಂತ ಸುರಿಯುತ್ತಿರುವ ಮುಂಗಾರು ಮಳೆ ನೀರು ಗುಂಡಿಗಳಲ್ಲಿ ಸಂಗ್ರಹವಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು ಈ ರಸ್ತೆ ಕಳೆದ ಒಂದು ವರ್ಷದಿಂದ ದುರಸ್ತಿ ಕಂಡಿಲ್ಲ. ಮೊದಲೇ ಗುಂಡಿ ಬಿದ್ದಿದ್ದ ರಸ್ತೆ ಮಳೆಗಾಲದಲ್ಲಿ ಮತ್ತಷ್ಟು ಹದಗೆಟ್ಟಿದೆೆ. ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ, ಮಹಾತ್ಮ ಗಾಂಧಿ ವೃತ್ತ, ಬ್ಯಾಂಕ್ ಆ್ ಬರೋಡ ಮುಂಭಾಗ, ಅಜ್ಜಂಪುರ ರಸ್ತೆ ಗುಂಡಿಮಯವಾಗಿದೆ. ಈ ರಸ್ತೆಯು ಬೀರೂರು ಶಿವಮೊಗ್ಗ, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನದಂತಹ ಹತ್ತು ಹಲವು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕೊಂಡಿಯಾಗಿದೆ.
ಪ್ರೇಕ್ಷಣೀಯ ಸ್ಥಳಗಳಿಗೂ ಸಂಪರ್ಕ: ಕಲ್ಲತ್ತಿಗಿರಿ, ದತ್ತಪೀಠ, ಕೆಮ್ಮಣ್ಣುಗುಂಡಿಯಂತಹ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೂ ಸಂಪರ್ಕ ಕಲ್ಪಿಸುತ್ತದೆ. ದಿನನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಹತ್ತಾರು ರೈಲುಗಳಲ್ಲಿ ಬಂದು ಹೋಗುವ ರೈಲ್ವೆ ಜಂಕ್ಷನ್ ಕೂಡ ಇದೆ. ಅಲ್ಲದೆ ಕಡೂರು ತಾಲೂಕಿನ ದೊಡ್ಡ ಹೋಬಳಿ ಕೇಂದ್ರವೂ ಹೌದು. ಈ ರಸ್ತೆಯ ಗುಂಡಿಗಳನ್ನು ತಪ್ಪಿಸಲು ಮುಂದಾಗುವ ವಾಹನ ಸವಾರರು ಅಪಘಾತಕ್ಕೀಡಾಗುವ ಪ್ರಕರಣಗಳು ದಾಖಲಾಗುತ್ತಿದೆ. ಆದರೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಲು ವರ್ಷದಿಂದ ಆಗದಿರುವುದು ವಿಪರ್ಯಾಸ.