ಬಸವಕಲ್ಯಾಣ: ಶ್ರೀ ಮಹಾತ್ಮ ಬಸವೇಶ್ವರ ಜಾತ್ರೋತ್ಸವ ನಿಮಿತ್ತ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿ ಆಶಯದಂತೆ ಶಾಸಕ ಶರಣು ಸಲಗರ ಅವರಿಂದ ರಾಷ್ಟ್ರಮಟ್ಟದ ಪುರುಷ ಮತ್ತು ಮಹಿಳೆಯರ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಮೇ 1, 2ರಂದು ಆಯೋಜಿಸಲಾಗಿದೆ.
ಬಸವೇಶ್ವರ ವೃತ್ತದಲ್ಲಿ ಸೋಮವಾರ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆಗೊಳಿಸಿದ ಸಲಗರ ಮಾತನಾಡಿ, ಕರೊನಾ ಮುಕ್ತವಾಗುತ್ತಿರುವ ಸಂದರ್ಭದಲ್ಲಿ ಬಸವೇಶ್ವರ ವಾಲಿಬಾಲ್ ಅಸೋಸಿಯೇಷನ್ ಸಹಯೋಗದಡಿ ಆಯೋಜಿಸಿರುವ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ 6 ಪುರುಷ, 4 ಮಹಿಳಾ ತಂಡಗಳು ಭಾಗವಹಿಸುತ್ತಿವೆ. ರಾಷ್ಟ್ರಮಟ್ಟದ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಯುವಕರಲ್ಲಿ ಕ್ರೀಡಾಪ್ರೇಮ ಬೆಳೆಸಿ ಪ್ರೋತ್ಸಾಹಿಸುವ ಉದ್ದೇಶದಿಂದ ವ್ಯವಸ್ಥಿತ ಮತ್ತು ಬೃಹತ್ ಪ್ರಮಾಣದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವಂತೆ ಪಂದ್ಯಾವಳಿ ಆಯೋಜಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸುಮಾರು 10 ಸಾವಿರ ಜನ ಕುಳಿತು ವೀಕ್ಷಿಸಲು ಆರ್ಟಿಫಿಸಿಯಲ್ ಗ್ಯಾಲರಿ ಜತೆಗೆ ಮಹಿಳಾ ವೀಕ್ಷಕರಿಗೂ ಪ್ರತ್ಯೇಕ ಗ್ಯಾಲರಿ ಮಾಡಲಾಗುತ್ತಿದೆ ಎಂದು ಹೇಳಿದರು.
ಮುಖಂಡ ಮನೋಹರ ಮೈಸೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ(ಬಿಡಿಪಿಸಿ) ಅಧ್ಯಕ್ಷ ಅನೀಲಕುಮಾರ ರಗಟೆ, ಕಮಿಟಿ ಖಜಾಂಚಿ ಹಾಗೂ ಶ್ರೀ ಬಸವೇಶ್ವರ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸುಭಾಷ ಹೊಳಕುಂದೆ, ಬಿಡಿಪಿಸಿ ಉಪಾಧ್ಯಕ್ಷ ಅಶೋಕ ನಾಗರಾಳೆ, ಕಾರ್ಯದರ್ಶಿ ರೇವಣಪ್ಪ ರಾಯವಾಡೆ, ಸಹ ಕಾರ್ಯದರ್ಶಿ ಬಸವರಾಜ ಬಾಲಿಕಿಲೆ, ನಿರ್ದೇಶಕರಾದ ಬಸವರಾಜ ತೊಂಡಾರೆ, ಮಲ್ಲಿಕಾರ್ಜುನ ಕುರಕೋಟೆ, ಮಲ್ಲಿಕಾರ್ಜುನ ಚಿರಡೆ, ಬಿಜೆಪಿ ನಗರ ಅಧ್ಯಕ್ಷ ಅರವಿಂದ ಮುತ್ತೆ, ಚನ್ನಪ್ಪ ರಾಜಾಪುರೆ, ಸಂಜುಕುಮಾರ ಸೂಗೂರೆ, ರವಿ ಕೋಳಕೂರ, ಸುನೀಲ ರಾಯವಾಡೆ, ಸಿದ್ದು ಬಿರಾದಾರ, ಲಿಂಗರಾಜ ಶಾಶೆಟ್ಟೆ, ದಿಗಂಬರ ಜಲ್ದೆ, ಶಿವಕುಮಾರ ಅಗ್ರೆ ಇತರರಿದ್ದರು.
ಭಾಗವಹಿಸುವ ತಂಡಗಳು: ಹುಬ್ಬಳಿ ರೈಲ್ವೆ ತಂಡ, ಮುಂಬೈ ಇನ್ಕಮ್ ಟ್ಯಾಕ್ಸ್, ವಿಜಯವಾಡ ರೈಲ್ವೆ, ಚೆನ್ನೈ ಎಂಇಜಿ ಹಾಗೂ ಐಸಿಎಫ್, ಮಂಗಳೂರು ನಗರ ಸೇರಿ 6 ಪುರುಷ, ಮೈಸೂರಿನ ಸ್ಪೋಟ್ಸರ್್ ಹಾಸ್ಟೆಲ್, ಮುಂಬೈನ ಸೆಂಟ್ರಲ್ ರೈಲ್ವೆ, ಧಾರವಾಡ ರೈಲ್ವೆ ಮತ್ತು ನಾಗಪುರ ಸೇರಿ 4 ಮಹಿಳಾ ತಂಡಗಳು ಭಾಗವಹಿಸಲಿವೆ.
ರಕ್ತದಾನ, ಆರೋಗ್ಯ ಶಿಬಿರ 29ಕ್ಕೆ: ಬಸವ ಜಯಂತಿ ನಿಮಿತ್ತ ಮೇ 3ರಿಂದ ಮೂರು ದಿನ ನಡೆಯಲಿರುವ ಮಹಾತ್ಮ ಬಸವೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಶ್ರೀ ಬಸವೇಶ್ವರ ಪಿಯು ಕಾಲೇಜಿನಲ್ಲಿ 29ರಂದು ಬೆಳಗ್ಗೆ 10ರಿಂದ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ನಾನು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡುತ್ತಿದ್ದು, ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ಸಾರ್ವಜನಿಕರು ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಗರ ಕೋರಿದ್ದಾರೆ.