ನ್ಯೂಸ್

ರಾಷ್ಟ್ರಮಟ್ಟದ ಚೆಸ್‌ನಲ್ಲಿ ಎಸ್.ಆರ್.ಎಸ್ ಶಾಲೆ ವಿದ್ಯಾರ್ಥಿನಿ ಪ್ರಥಮ

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ ವಿದ್ಯಾರ್ಥಿಗಳು ಸಿಬಿಎಸ್‌ಇ ಚೆಸ್ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹೇಳಿದರು.

ನಗರದ ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ನಡೆದ ಸರಳ ಕಾರ‌್ಯಕ್ರಮದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದ ಅವರು, ಈ ಮಕ್ಕಳ ಪ್ರತಿಭೆ, ಸಾಧನೆ ಹಾಗೂ ಕೋಚ್‌ಗಳಾದ ತಿಮ್ಮೇಶ್, ಪಾರ್ವತಿ ಅವರ ಕಾರ‌್ಯವನ್ನು ಲಿಂಗಾರೆಡ್ಡಿ ಶ್ಲಾಘಿಸಿದರು.

ಪ್ರಾಚಾರ‌್ಯ ಎಂ.ಎಸ್.ಪ್ರಭಾಕರ್ ಮಾತನಾಡಿ, 7ನೇ ತರಗತಿ ವಿದ್ಯಾರ್ಥಿ ಎಸ್.ಆರ್. ಅಪೇಕ್ಷಾ ಈಚೆಗೆ ಜಲಂಧರ್‌ನ ಲಾ ಬ್ಲಾಸಮ್ ಶಾಲೆಯಲ್ಲಿ ಜರುಗಿದ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾವಳಿಯ ವೈಯಕ್ತಿಕ ಎರಡನೇ ಬೋರ್ಡ್ ವಿಭಾಗದಲ್ಲಿ 5 ಸುತ್ತುಗಳೊಂದಿಗೆ 4.5 ಪಾಯಿಂಟ್ ಪಡೆದು ಪ್ರಥಮ ಸ್ಥಾನ ಗಳಿಸುವ ಮೂಲಕ ಶಾಲೆ, ಪಾಲಕರು, ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

ಹರಪನಹಳ್ಳಿ ಪರ್ಲ್ ಪಬ್ಲಿಕ್ ಶಾಲೆಯಲ್ಲಿ ಈ ಮುನ್ನ ನಡೆದಿದ್ದ ಜೋನಲ್ ಲೆವೆಲ್ ಚೆಸ್ ಪಂದ್ಯಾವಳಿ 17ರ ವಯೋಮಿತಿಯ ಒಳಗಿನ ವೈಯಕ್ತಿಕ ಬೋರ್ಡಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಎಸ್. ಅಪೇಕ್ಷಾ, 5ನೇ ತರಗತಿಯ ನೌಮಿಕಾ, 9ನೇ ತರಗತಿಯ ಹಾಸಿನಿ ಮತ್ತು ಸಂಜನಾ (9ನೇ ತರಗತಿ) ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಪ್ರತಿಭೆ ಮತ್ತು ಶ್ರಮದಿಂದ ವಿದ್ಯಾರ್ಥಿಗಳು ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆ ಕಾರ‌್ಯದರ್ಶಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್. ಅಮೋಘ್, ಆಡಳಿತಾಧಿಕಾರಿ ಡಾ.ಟಿ.ಎಸ್. ರವಿ ಪ್ರಶಂಸಿಸಿದರು.