ಪ್ರಸ್ತುತ ಸನ್ನಿವೇಶದಲ್ಲಿ ರಾಷ್ಟ್ರಪ್ರೇಮ ಬೆಳೆಸುವುದರ ಜತೆಗೆ ದೇಶದೊಳಗೆ ರಾಷ್ಟ್ರ ದ್ರೋಹ ಬೆಳೆಯದಂತೆ ನೋಡಿಕೊಳ್ಳುವುದು ಸಹ ದೊಡ್ಡ ಸವಾಲಾಗಿದೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಬಿಎಸ್‌ಎಸ್ ವಿದ್ಯೋದಯ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೇಜಾವರ ಶಿಕ್ಷಣ ಸಂಸ್ಥೆಗಳ ಎರಡು ದಿನಗಳ ಶೈಕ್ಷಣಿಕ ಸಮ್ಮೇಳನ ಸಂವರ್ಧನ 2025 ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಭಗವಂತನನ್ನು ಎಲ್ಲೆಡೆ ಕಾಣಬೇಕು. ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹಾಕಿಕೊಟ್ಟ ಘೋಷ ವಾಕ್ಯ ಮಾತೃದೇವೋಭವ, ಪಿತೃದೇವೋಭವ, ಅತಿಥಿ ದೇವೋ ಭವದ ಜತೆಗೆ ರಾಷ್ಟ್ರ ದೇವೋಭವ ಎಂಬ ವಿಷಯವನ್ನು ಎಲ್ಲ ಮಕ್ಕಳಲ್ಲಿಯೂ ಬೆಳೆಸಬೇಕು. ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ತುಂಬುವ ಜತೆಗೆ ಶಿಕ್ಷಕರು ಶಿಕ್ಷಣವನ್ನು ನೀಡುವುದೂ ರಾಷ್ಟ್ರ ಸೇವೆಯೇ ಆಗಿದೆ ಎಂದರು.
ನೆಮ್ಮದಿ ಸಮಾಜ ಸೃಷ್ಟಿಸುವುದು ಪ್ರಸ್ತುತ ಅತ್ಯವಶ್ಯಕ.ಇದು ಸಾಧ್ಯವಾಗಬೇಕಾದರೆ ಆಚಾರ- ವಿಚಾರ, ನಡೆ-ನುಡಿ, ಭಾಷೆ -ಭಾವ ಸಂಸ್ಕೃತಿ -ಸಂಸ್ಕಾರ ತುಂಬುವ ಶಿಕ್ಷಣ ನೀಡಬೇಕು. ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುವಂತೆ, ಉತ್ತಮ ಪ್ರಜೆಗಳಾಗುವಂತೆ ಮಕ್ಕಳನ್ನು ರೂಪಿಸಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ವಿಜಯ ವಿಠಲ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ ಹಾಗೂ ಬಿಎಸ್‌ಎಸ್ ವಿದ್ಯೋದಯದ ಗೌರವ ಕಾರ್ಯದರ್ಶಿ ಆರ್.ವಾಸುದೇವ್ ಭಟ್ ಮಾತನಾಡಿ, ಕರ್ನಾಟಕದಾದ್ಯಂತ ಇರುವ ಪೇಜಾವರ ಶಿಕ್ಷಣ ಸಂಸ್ಥೆಗಳ ವಿದ್ಯಾಭ್ಯಾಸದಲ್ಲಿ ಏಕತಾನತೆ ಹೊಂದಬೇಕೆಂಬ ಉದ್ದೇಶದಿಂದ ಸಂವರ್ಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರಸ್ತುತ ಇಂದಿನ ಕಾರ್ಯಕ್ರಮ ಮೂರನೇ ಸಮಾವೇಶವಾಗಿದ್ದು, ಕಾರ್ಯಕ್ರಮದಲ್ಲಿ ಕರ್ನಾಟಕದಾದ್ಯಂತ ಇರುವ ಪೇಜಾವರ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ಪ್ರಾಂಶುಪಾಲರು ಮತ್ತು ಶಿಕ್ಷಕರು ಭಾಗವಹಿಸಿದ್ದಾರೆ. ಇಂದು ಯಾವುದೇ ನಿರ್ದಿಷ್ಟ ಬೋಧನಾ ವಿಷಯದ ಬಗ್ಗೆ ತರಬೇತಿ ಇರುವುದಿಲ್ಲ. ಬದಲಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರ ವ್ಯಕ್ತಿತ್ವದ ಅಭಿವೃದ್ಧಿಗೆ ಪೂರಕವಾದ ವಿಷಯಗಳನ್ನು ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ವಿಜಯ ವಿಠಲ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಸಿ.ಎ.ವಿಶ್ವನಾಥ್, ಉದ್ಯಮಿ ಜಗನ್ನಾಥ ಶೆಣೈ ಇತರರಿದ್ದರು. ಸ್ವಾಮಿ ಯುಕ್ತೇಶಾನಂದ ಜಿ.ಮಹಾರಾಜ್ ಮತ್ತು ಆರ್‌ಎಸ್‌ಎಸ್‌ನ ಸು.ರಾಮಣ್ಣ ವಿಶೇಷ ಉಪನ್ಯಾಸ ನೀಡಿದರು. ಕ್ಯಾಪ್ಟನ್ ನವೀನ್ ನಾಗಪ್ಪ ಆಪರೇಷನ್ ಸಿಂಧೂರ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ದಿಶಾ ಸ್ವಯಂಸೇವಕರು ಸಂವಾದಾತ್ಮಕ ಚಟುವಟಿಕೆಗಳನ್ನು ನಡೆಸಿದರು. ಶ್ರೀಧರ್ ಜೈನ್ ಅವರ ತಂಡದಿಂದ ಹೆಜ್ಜೆ-ಗೆಜ್ಜೆ ಎಂಬ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗು ನೀಡಿತು.