ಅರಕಲಗೂಡು: ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಹೊಡೆತ ಅನುಭವಿಸುತ್ತಿರುವ ರೈತರಿಗೆ ಬುಧವಾರ ಭಾರಿ ಪ್ರಮಾಣದಲ್ಲಿ ಬೇಲ್ ಗಳು ಅವಕವಾದ ಪರಿಣಾಮ ಮಾರುಕಟ್ಟೆ ಹೊರಗೆ ಬಿಸಿಲಿನಲ್ಲಿ ನರಳುವ ದುಸ್ಥಿತಿ ಎದುರಾಗಿತ್ತು.
ರಾಮನಾಥಪುರದ ಎರಡು ತಂಬಾಕು ಮಾರುಕಟ್ಟೆಗಳಲ್ಲಿ ಕಳೆದೊಂದು ವಾರದಿಂದ ದಿನೇ ದಿನೇ ಅಪಾರ ಬೇಲ್ ಗಳು ಅವಕವಾಗುತ್ತಿದ್ದು ಬೀದಿಗೆ ಬೀಳುತ್ತಿವೆ. ಮಾರುಕಟ್ಟೆಯ ಉಗ್ರಾಣಗಳು ಭರ್ತಿಯಾಗಿವೆ.
ಹರಾಜಾದ ಬೇಲ್ ಗಳನ್ನು ಸಂಗ್ರಹಿಸಲು ಉಗ್ರಾಣಗಳು ಕೊರತೆ ಎದುರಾಗಿದೆ. ಇಂದು ಮಾರುಕಟ್ಟೆಯೊಳಗೆ ಬೇಲ್ ಗಳ ಹರಾಜು ಪ್ರಕ್ರಿಯೆ ನಡೆದಿದ್ದು ಜಗುಲಿ ಮೇಲೆ ನೂರಾರು ಬೇಲ್ ಗಳು ಬಿದ್ದಿದ್ದು ರೈತರನ್ನು ಹೈರಾಣಾಗಿಸಿದೆ. ಮಾರುಕಟ್ಟೆಗೆ ಬೇಲ್ ಗಳನ್ನು ತಂದ ರೈತರಿಗೆ ಇದಿಷ್ಟೆ ನರಕವಲ್ಲ. ಜಗುಲಿ ಮೇಲೆಯೂ ಜಾಗ ಸಾಕಾಗದೆ ಮಾರುಕಟ್ಟೆ ಒಳ ಪ್ರವೇಶಿಸದಂತೆ ಗೇಟ್ ಗೆ ಬೀಗ ಜಡಿಯಲಾಗಿದೆ.
ಪರಿಣಾಮವಾಗಿ ಬೇಲ್ ಗಳನ್ನು ಹೊತ್ತು ತರುತ್ತಿರುವ ವಾಹನಗಳು ರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ನಿಂತಿದ್ದು ಹೊಗೆಸೊಪ್ಪು ಬೇಲ್ ಗಳನ್ನು ತಂದ ರೈತರು ಬಿಸಿಲಿನಲ್ಲಿ ಬೇಗೆಗೆ ಸಿಲುಕಿ ತತ್ತರಿಸುವಂತಾಗಿದೆ.
ಸಾವಿರಾರು ರೂ ಸಾಲ ಮಾಡಿ ಬೆವರು ಸುರಿಸಿ ಬೆಳೆದ ತಂಬಾಕಿಗೆ ಇತ್ತ ಮಾರುಕಟ್ಟೆಯಲ್ಲಿ ದರ ಕುಸಿತ ಮಾಮೂಲಿಯಾಗಿ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಹರಾಜಿಗಾಗಿ ಬೇಲ್ ಗಳನ್ನು ತರುವುದೇ ಸಾಕೆನಿಸಿದೆ ಎಂದು ರೈತ ಜಗದೀಶ್ ಆತಂಕ ಹೊರಹಾಕಿದರು.