ನ್ಯೂಸ್

ರಾಮನ ಗುಡಿ ನಿರ್ಮಾಣಕ್ಕೆ ಚಾಲನೆ

ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆಗೆ ಕೃಷ್ಣಶಿಲೆ ದೊರೆತ ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ರಾಮದಾಸ್ ಅವರ ಜಮೀನಿನಲ್ಲಿ ಬುಧವಾರ ವಿಶೇಷ ಪೂಜೆ ನಡೆಯಿತು. ಜತೆಗೆ ಅದೇ ಸ್ಥಳದಲ್ಲಿ ರಾಮನ ಗುಡಿ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ರಾಮಲಲ್ಲಾ ಮೂರ್ತಿಗೆ ಶಿಲೆ ನೀಡಿದ ಸ್ಥಳಕ್ಕೆ ಭೇಟಿ ನೀಡಿದ ಸಾವಿರಾರು ಭಕ್ತರು ಶಿಲೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಾಮನ ಸ್ಮರಣೆ ಮಾಡಿ ಧನ್ಯತಾ ಭಾವ ಮೆರೆದರು.

ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಇತರ ಗಣ್ಯರು ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೃಷ್ಣಶಿಲೆಗೂ ಪೂಜೆ ಸಲ್ಲಿಸಿದರು. ಪುರೋಹಿತ ಪ್ರಹ್ಲಾದ ರಾವ್ ಪೂಜಾ ವಿಧಿವಿಧಾನ ನಡೆಸಿಕೊಟ್ಟರು. ಜಮೀನಿನ ಮಾಲೀಕರಾದ ಎಚ್.ರಾಮದಾಸ್, ಎಚ್.ಆರ್. ರಂಗಸ್ವಾಮಿ, ಶ್ರೀನಿವಾಸ್, ಗ್ರಾಮದ ಮುಖಂಡರಾದ ನಿಂಗೇಗೌಡ, ಮೂರ್ತಿ, ಚಿಕ್ಕಣ್ಣ ನಾಯಕ, ಚನ್ನಕೇಶವ, ಚಂದ್ರು ಇದ್ದರು.

ಶಾಸಕ ಜಿ.ಟಿ.ದೇವೇಗೌಡ ದೇಗುಲ ನಿರ್ಮಾಣಕ್ಕೆ ಸಕಲ ನೆರವು ನೀಡುವುದಾಗಿ ಭರವಸೆ ನೀಡಿದರು. ಜತೆಗೆ ಶಿಲೆ ಸಿಕ್ಕ ಜಾಗದಲ್ಲೇ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ. ಈ ವಿಚಾರದಲ್ಲಿ ಯಾವುದೇ ಗೊಂದಲಗಳು ಇಲ್ಲ. ಸುಸೂತ್ರವಾಗಿ ದೇವಾಲಯ ನಿರ್ಮಾಣ ಆಗಲಿದೆ ಎಂದು ಹೇಳಿದರು.

ಎಚ್.ಆರ್.ರಂಗಸ್ವಾಮಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಿ ವರ್ಷವಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ವಿಶೇಷ ಪೂಜೆ ನಡೆಸುವುದರೊಂದಿಗೆ ಶಾಸಕ ಜಿ.ಟಿ.ದೇವೇಗೌಡ ಅವರ ಮಾರ್ಗದರ್ಶನದಲ್ಲಿ ದೇಗುಲ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದಕ್ಕೆ ಹಾರೋಹಳ್ಳಿ, ಗುಜ್ಜೇಗೌಡನಪುರ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಕೈ ಜೋಡಿಸಿದ್ದಾರೆ ಎಂದರು. ಎಚ್.ರಾಮದಾಸ್ ಅವರ ಜಮೀನಿನಲ್ಲಿ ದೊರೆತ ಶಿಲೆಯನ್ನು ಎರಡು ವರ್ಷದ ಹಿಂದೆ ಅಯೋಧ್ಯೆಗೆ ಕಳುಹಿಸಲಾಗಿತ್ತು. ಆ ಶಿಲೆಯಿಂದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿಯನ್ನೇ ಪ್ರತಿಷ್ಠಾಪನೆ ಮಾಡಲಾಗಿದೆ.

ನಾನಾ ಪೂಜಾ ಕೈಂಕರ್ಯಗಳು

ಗ್ರಾಮಸ್ಥರ ಸಮ್ಮುಖದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಜಮೀನಿನಲ್ಲಿ ರಾಮಲಲ್ಲಾನ ಚಿತ್ರವಿರಿಸಿ ಗಣಪತಿ ಹೋಮ, ನವಗ್ರಹ ಹೋಮ, ಭೂ ವರಾಹಸ್ವಾಮಿ ಪೂಜೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಗಳು ನಡೆಯಿತು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಕಳೆದ ವರ್ಷ ದೇಗುಲ ನಿರ್ಮಾಣಕ್ಕೆ ಗ್ರಾಮಸ್ಥರು ಹಾಗೂ ರಾಜಕೀಯ ಮುಖಂಡರು ಅದ್ದೂರಿಯಾಗಿ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ ಕೊನೆಯ ಘಳಿಗೆಯಲ್ಲಿ ಉಂಟಾದ ಗೊಂದಲದಿಂದ ನಿಂತು ಹೋಗಿದ್ದ ಮಂದಿರ ನಿರ್ಮಾಣ ಕಾರ್ಯಕ್ಕೆ ಇದೀಗ ಜೀವ ಬಂದಿದೆ.

ಆಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಪ್ರಯುಕ್ತ ರಾಮನ ಮೂರ್ತಿಗೆ ಶಿಲೆ ನೀಡಿದ ಜಾಗದ ಮಾಲೀಕ ರಾಮದಾಸ್ ಅವರ ಕುಟುಂಬದ ನೇತೃತ್ವದಲ್ಲಿ ಸಂಘಟಿತರಾದ ಹಾರೋಹಳ್ಳಿ ಮತ್ತು ಗುಜ್ಜೇಗೌಡನಪುರದ ಗ್ರಾಮಸ್ಥರು, ವಿಶೇಷ ಪೂಜೆ ಮತ್ತು ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದರು.