ನ್ಯೂಸ್

ರಾಬರ್ಟ್ ವಾದ್ರ ಕ್ಷಮೆಯಾಚನೆಗೆ ಕಾರಜೋಳ ಒತ್ತಾಯ

ಚಿತ್ರದುರ್ಗ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹಿಂದುತ್ವ ಮತ್ತು ಬಿಜೆಪಿ ಕಾರಣವೆಂಬ ಹೇಳಿಕೆಗೆ ರಾಬರ್ಟ್‌ವಾದ್ರಾ ದೇಶದ ಜನರ ಕ್ಷಮೆ ಕೇಳ ಬೇಕು ಎಂದು ಸಂಸದ ಗೋವಿಂದ ಎಂ. ಕಾರಜೋಳ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ಖರ್ಗೆ ಅವರು, ಇಂಥ ಸಂದರ್ಭದಲ್ಲಿ ದೇ ಶದ ಪರ ಎಲ್ಲರೂ ನಿಲ್ಲಬೇಕು, ಎಲ್ಲರೂ ಒಗ್ಗಟ್ಟಾಗಿರಬೇಕು ಎಂದಿದ್ದಾರೆ. ಆದರೆ, ಹಿಂದುತ್ವ, ಬಿಜೆಪಿ ಕುರಿತು ಮಾತನಾಡಿರುವ ವಾದ್ರಾರನ್ನು ಕಾಂಗ್ರೆಸ್‌ನಿಂದ ಉಚ್ಛಾಟಿಸಬೇಕಿತ್ತು, ದೇಶದ್ರೋಹಿ ಎಂದು ಸಾರಬೇಕಿತ್ತು. ವಾದ್ರಾ ಕ್ಷಮೆ ಕ್ಷೇಳದಿದ್ದರೆ ಅವರನ್ನು ದೇಶದ್ರೋಹಿ ಎಂದು ಸಾರುತ್ತೀರಾ ಎಂಬುದರ ಕುರಿತು ಸ್ಪಷ್ಟಪಡಿಸಬೇಕು ಎಂದು ಖರ್ಗೆ ಅವರನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹಿಂದುತ್ವ ಹಾಗೂ ಬಿಜೆಪಿ ಬಗ್ಗೆ ವಾದ್ರಾ ಮಾತನಾಡುವುದು ಸರಿಯಲ್ಲ. ದೇಶದ 140 ಕೋಟಿ ಜನರು ಪಹಲ್ಗಾಮ್ ಘಟನೆಯನ್ನು ಖಂಡಿಸಬೇಕಿದೆ. ಅದನ್ನು ಎದುರಿಸಬೇಕಿದೆ. ದೇಶದ ಆಡಳಿತಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ಅದನ್ನು ಬಿಟ್ಟು ಹಿಂದುತ್ವ, ಬಿಜೆಪಿ ಬಗ್ಗೆ ಅವಹೇಳನಕಾರಿಯಾಗಿ, ದೇಶ ದ್ರೋಹಿಯ ರೀತಿ ಮಾತನಾಡಿರುವುದನ್ನು ಒಪ್ಪುತ್ತೀರಾ ಎಂದು ಕಾರಜೋಳ ಸಂಸದ ರಾಹುಲ್‌ಗಾಂಧಿ ಅವರನ್ನೂ ಪ್ರಶ್ನಿಸಿದರು.

ಉಗ್ರರ ದಾಳಿಗೆ 26 ಜನ ಅಮಾಯಕರು ಬಲಿಯಾಗಿದ್ದಾರೆ. ಇದು ದೇಶದ ಮೇಲೆ ನಡೆದ ಅತ್ಯಂತ ಕ್ರೂರ ದಾಳಿಯಾಗಿದೆ. ಉಗ್ರಗಾಮಿ ಚಟುವಟಿಕೆ ಆರಂಭವಾದ 1990ರಿಂದ ಅಂದಾಜು 24 ವರ್ಷಗಳ ಕಾಲ ಕಾಂಗ್ರೆಸ್ ದೇಶದಲ್ಲಿ ಆಡಳಿತ ನಡೆಸಿದೆ. 2014 ರವರೆಗೆ ನರೇಂದ್ರ ಮೋದಿ ಪ್ರಧಾನಿ ಆಗಿರಲಿಲ್ಲ, ಅಮಿತ್‌ಷಾ ಗೃಹ ಮಂತ್ರಿ ಆಗಿರಲಿಲ್ಲ. ಕಾಂಗ್ರೆಸ್ ಆಡಳಿತದ ಮೂಲ ಕಾಶ್ಮೀರಿ ಪಂಡಿತರು. ಮೋತಿಲಾಲ್ ನೆಹರು, ಪಂಡಿತ್ ಜವಹರ್‌ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಅವರ ಕಪಿಮುಷ್ಠಿಯಲ್ಲಿ ಕಾಂಗ್ರೆಸ್ ಆಡಳಿತವಿತ್ತು.

ರಾಹುಲ್‌ಗಾಂಧಿ ನೆಹರು ವಂಶದ ಕುಡಿ ಎಂಬ ಕಾರಣಕ್ಕೆ ದೇಶದಲ್ಲಿ ರಾಜ ಮಹಾರಾಜರಂತೆ ಮೆರೆಯುತ್ತಿದ್ದಾರೆ. 1990ರಿಂದ 24 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಕಾಶ್ಮೀರಿ ಕಣಿವೆಯಲ್ಲಿ 44 ಸಾವಿರ ಜನರನ್ನು ಭಯೋತ್ಪಾದಕರು ಕೊಂದಿದ್ದಾರೆ. 6.50 ಲಕ್ಷ ಕಾಶ್ಮೀರಿ ಪಂಡಿತರನ್ನು ಚಿತ್ರಹಿಂಸೆ ಕೊಟ್ಟು ಕಾಶ್ಮೀರ ಕಣಿವೆಯಿಂದ ಓಡಿಸಿದ್ದಾರೆ. ಕಾಶ್ಮೀರಿ ಪಂಡಿತರ ಪರ ಧ್ವನಿ ಎತ್ತದ ಇವರು ಈಗ ಹಿಂದುಗಳ ಬಗ್ಗೆ ದ್ವೇಷ ಕಾರುತ್ತಿದ್ದಾರೆ. ಅವಮಾನಕಾರಿಯಾಗಿ ಮಾತನಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರದು. ಕಾಂಗ್ರೆಸ್ ಸರ್ವನಾಶಕ್ಕೆ ಇದು ಕಾರಣವಾಗಲಿದೆ ಎಂದು ಗೋವಿಂದ ಕಾರಜೋಳ ರಾಹುಲ್‌ಗಾಂಧಿ ನಡೆ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.