ಬಾಳೆಹೊನ್ನೂರಿನ ಮಲ್ನಾಡ್ ಗೆಳೆಯರ ಬಳಗ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಬೃಹತ್ ವಾಹನ ಜಾಥಾಕ್ಕೆ ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ ಚಾಲನೆ ನೀಡಿದರು. ಸಂತೋಷ್‌ಕುಮಾರ್, ಮಧುಸೂದನ್, ಜಯಪ್ರಕಾಶ್, ಅರುಣೇಶ್ ಇತರರಿದ್ದರು. 
ನ್ಯೂಸ್

ರಾಜ್ಯೋತ್ಸವಕ್ಕೆ ಮೆರುಗು ತಂದ ಬೃಹತ್ ವಾಹನ ಜಾಥಾ

ಬಾಳೆಹೊನ್ನೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಮಲ್ನಾಡ್ ಗೆಳೆಯರ ಬಳಗ ಪ್ರಥಮ ಬಾರಿಗೆ ಆಯೋಜಿಸಿದ್ದ ವಾಹನ ಜಾಥಾ ರಾಜ್ಯೋತ್ಸವದ ಮೆರುಗು ಹೆಚ್ಚಿಸಿತು.

ರಂಭಾಪುರಿ ಪೀಠದಲ್ಲಿ ಆರಂಭಗೊಂಡ ಬೃಹತ್ ವಾಹನ ಜಾಥಾ ಮಸೀದಿಕೆರೆ, ರೇಣುಕನಗರ, ಕೆರೆ ಚೌಡೇಶ್ವರಿ ಸರ್ಕಲ್, ಲಯನ್ಸ್ ವೃತ್ತ, ಜೇಸಿ ವೃತ್ತ, ರೋಟರಿ ವೃತ್ತದ ಮೂಲಕ ಬಸ್ ನಿಲ್ದಾಣ, ಕೊಪ್ಪ ರಸ್ತೆಯ ಅರಣ್ಯ ಇಲಾಖೆ ಕಚೇರಿ ಮುಂಭಾಗದವರೆಗೆ ತೆರಳಿ ಕಲಾರಂಗ ಕ್ರೀಡಾಂಗಣದಲ್ಲಿ ಜಮಾವಣೆಗೊಂಡಿತು.

ವಾಹನ ಜಾಥಾದಲ್ಲಿ 600ಕ್ಕೂ ಅಧಿಕ ವಾಹನಗಳು ಪಾಲ್ಗೊಂಡಿದ್ದವು. ಬೈಕ್, ಸ್ಕೂಟರ್, ಆಟೋ, ಕಾರು, ಜೀಪು, ಸರಕು ಸಾಗಣೆ ನಾಲ್ಕು ಚಕ್ರದ ವಾಹನಗಳು, ಲಾರಿ, ಜೆಸಿಬಿ, ಕ್ರೇನ್‌ಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.

ಎಲ್ಲ ವಾಹನಗಳನ್ನೂ ಕನ್ನಡದ ಬಾವುಟ ಹಾಗೂ ಹೂವುಗಳೊಂದಿಗೆ ವಿವಿಧ ಪರಿಕಲ್ಪನೆ ಹಾಗೂ ಜನರಿಗೆ ವಿಶೇಷ ಸಂದೇಶಗಳನ್ನು ತಲುಪಿಸುವ ಯೋಚನೆಯೊಂದಿಗೆ ಸಿಂಗಾರಗೊಳಿಸಲಾಗಿತ್ತು.

ಪ್ರಮುಖವಾಗಿ ಕಾರು, ಜೀಪು ಹಾಗೂ ಸರಕು ಸಾಗಣೆ ವಾಹನಗಳು ಕನ್ನಡದ ಜ್ಞಾನಪೀಠ ಪುರಸ್ಕೃತರ ವಿವರ, ಸುವರ್ಣ ಕರ್ನಾಟಕ ವರ್ಷಾಚರಣೆಯ ಮಾಹಿತಿಯೊಂದಿಗೆ ಅಲಂಕರಿಸಲಾಗಿತ್ತು. ಇದರೊಂದಿಗೆ ವಿಶೇಷ ಮಾದರಿಯಲ್ಲಿ ಕನ್ನಡದ ಕಾರಂಜಿ ಹೆಸರಿನಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಚಿಲುಮೆ ತಾಯಿ ಭುವನೇಶ್ವರಿ ಸನ್ನಿಧಿಯಲ್ಲಿ ಚಿಮ್ಮುವುದನ್ನು ಪಿಕ್‌ಅಪ್ ವಾಹನದಲ್ಲಿ ವಿಶೇಷವಾಗಿ ರೂಪುಗೊಳಿಸಲಾಗಿತ್ತು.

ಹಲವು ವಾಹನಗಳಲ್ಲಿ ಚಿತ್ರನಟ ಪುನೀತ್ ರಾಜ್‌ಕುಮಾರ್, ಶಂಕರ್‌ನಾಗ್ ಭಾವಚಿತ್ರ ರಾರಾಜಿಸಿದವು. ಓಮ್ನಿ ವಾಹನಯೊಂದು ಸಂಪೂರ್ಣ ಹುಲ್ಲಿನ ಗುಡಿಸಲಿನ ಮಾದರಿಯಲ್ಲಿ, ಬೈಕ್‌ವೊಂದು ಮನೆಯ ಮಾದರಿಯಲ್ಲಿ ಹಾಗೂ ಸಂಪೂರ್ಣ ಹಳದಿ, ಕೆಂಪು ಬಣ್ಣದ ಬಲೂನ್, ಧ್ವಜಗಳಿಂದ ಸಿಂಗಾರಗೊಂಡು ನೋಡುಗರ ಮನಸೆಳೆಯಿತು. ಯುವತಿಯರು, ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ನೂರಾರು ಜನರು ಹಳದಿ, ಕೆಂಪು ಪೇಟ ಧರಿಸಿ ಗಮನಸೆಳೆದರು.

ಜಾಥಾದ ಸಮಾರೋಪದಲ್ಲಿ ಆಯೋಜಕ ಬಿ.ಸಿ.ಸಂತೋಷ್‌ಕುಮಾರ್ ಮಾತನಾಡಿ, ರಾಜ್ಯೋತ್ಸವದ ಕಂಪನ್ನು ವಿಶೇಷವಾಗಿ ಸಾರಬೇಕು ಎಂಬ ಉದ್ದೇಶದಿಂದ ಮೊದಲ ಬಾರಿಗೆ ಮಲ್ನಾಡ್ ಗೆಳೆಯರ ಬಳಗ ಎಲ್ಲ ಮಾದರಿಯ ವಾಹನಗಳ ಜಾಥಾ ಆಯೋಜಿಸಿದ್ದು ನಿರೀಕ್ಷೆಗೂ ಮೀರಿ ಅದ್ಭುತ ಬೆಂಬಲ ದೊರೆತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ವಿಯಾಗಿ ಈ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ಆಯೋಜಕ ಬಿ.ಕೆ.ಮಧುಸೂದನ್ ಮಾತನಾಡಿ, ಬಾಳೆಹೊನ್ನೂರು ಸುತ್ತಲಿನ ಕನ್ನಡಿಗರು ರಾಜ್ಯೋತ್ಸವದ ಜಾಥಾಕ್ಕೆ ಪ್ರೋತ್ಸಾಹಿಸಿದ್ದು ಅವರ ಪ್ರೀತಿ, ಅಭಿಮಾನಕ್ಕೆ ಚಿರಋಣಿಯಾಗಿದ್ದೇವೆ ಎಂದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಡಾ. ಕೆ.ಜಿ.ಭಟ್, ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಎಂ.ಎಸ್.ಚನ್ನಕೇಶವ್, ಎಂ.ಎಸ್.ಜಯಪ್ರಕಾಶ್, ಮಂಜುನಾಥ್ ತುಪ್ಪೂರು, ಜಾನ್ ಡಿಸೋಜಾ, ಟಿ.ಎಂ.ಉಮೇಶ್, ಎಂ.ಎಸ್.ಅರುಣೇಶ್, ಮಹಮ್ಮದ್ ಹನೀಫ್, ಪ್ರಭಾಕರ್ ಪ್ರಣಸ್ವಿ, ಸಂದೀಪ್ ಶೆಟ್ಟಿ, ಕೆ.ಎಂ.ರಾಘವೇಂದ್ರ, ಸುರೇಂದ್ರ ಮಾಸ್ತರ್, ಕಾಫಿ ಗಿರೀಶ್, ಹೇಮಲತಾ, ರಂಜಿತಾ, ಸತೀಶ್ ಅರಳೀಕೊಪ್ಪ, ಒ.ಡಿ.ಸ್ಟೀಫನ್, ಸುಚಿತಾ ಹೆಗ್ಡೆ, ನಿಖಿಲೇಶ್, ಸಿ.ಪಿ.ರಮೇಶ್ ಮತ್ತಿತರರಿದ್ದರು.