ನ್ಯೂಸ್

ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ

ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಇದೆಲ್ಲಾ ಕೇವಲ ಊಹಾಪೋಹ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂಬುದು ಬರೀ ಚರ್ಚೆ ಅಷ್ಟೇ. ನಮ್ಮ ಪಕ್ಷದಲ್ಲಿ ಈ ಬಗ್ಗೆ ಚರ್ಚೆಯೇ ಇಲ್ಲ. ಇದು ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಆಗುತ್ತಿದೆ. ಸಿಎಂ ಬದಲಾವಣೆಗೆ ಯಾರಾದರೂ ಡೆಡ್‌ಲೈನ್ ಕೊಟ್ಟಿದ್ದಾರಾ? ಮಾಧ್ಯಮದಲ್ಲಿ ನೋಡಿಕೊಂಡು ಕೆಲವರು ಹೇಳುತ್ತಾರೆ. ನಮ್ಮ ಪಕ್ಷದಲ್ಲಿ ಈ ವಿಷಯಗಳ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇನ್ನು ಸಿಎಂ ರೇಸ್‌ನಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಸಿಎಂ ರೇಸ್‌ನಿಂದ ಹಿಂದೆ ಸರಿದಿದ್ದೇನೆ. ಹಿಂದೆ ಸರಿದು ಒಂದು ವರ್ಷವೇ ಆಗಿದೆ ಎಂದರು.

ಇನ್ನು ದಲಿತ ಸಿಎಂ ಕೂಗು ಕೇಳಿ ಬರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ದಲಿತ ಸಿಎಂ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಅವರವರ ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ. ಆದರೆ, ಈ ಕುರಿತು ಡಿನ್ನರ್ ಸಭೆಯಲ್ಲಿ ಏನು ಚರ್ಚೆ ನಡೆಸಿಲ್ಲ. ಸಿಎಂ ಡಿನ್ನರ್‌ಗೆ ಕರೆದಿದ್ದರು ನಾವು ಹೋಗಿದ್ದೆವು ಅಷ್ಟೇ ಎಂದು ಹೇಳಿದರು.