ಚಿತ್ರದುರ್ಗ: ರಾಜ್ಯದಿಂದ ಪಾವತಿಯಾಗುವ ತೆರಿಗೆ ಪಾಲು ಸಹ ಕೇಂದ್ರ ಸರ್ಕಾರ ಸರಿಯಾಗಿ ಕೊಡುತ್ತಿಲ್ಲ. ಬಿಜೆಪಿ ನಾಯಕರಿಗೆ ಕರ್ನಾಟಕದ ಕುರಿತು ಕಾಳಜಿ ಇದ್ದರೆ, 65 ಸಾವಿರ ಕೋಟಿ ರೂ. ಕೊಡಿಸಲಿ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸವಾಲು ಹಾಕಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ್ದೂ ಪಾಲಿದೆ. ಕೇಂದ್ರ ಸರ್ಕಾರ ಕೊಟ್ಟರೂ ನಾಡಿನ ಜನತೆ ಪಾವತಿಸಿದ ತೆರಿಗೆ ಹಣವನ್ನೇ ಹೊರತು ಸ್ವಂತದಲ್ಲ ಎಂದರು.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತಗಳ್ಳತನ ಕುರಿತು ಚುನಾವಣೆ ಆಯೋಗಕ್ಕೆ ಡಿಜಿಟಲ್ ದಾಖಲೆ ಕೇಳಿದ್ದಕ್ಕೆ ಅಫಿಡೆವಿಟ್ ನೀಡುವ ಅಗತ್ಯವಿಲ್ಲ. ಆದರೂ ಆಯೋಗ ಮಾತ್ರ ಕೊಡುತ್ತಿಲ್ಲ. ಸಂವಿಧಾನ ಅರಿತುಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಕೇಂದ್ರ ಸರ್ಕಾರದಿಂದ ದೇಶದ ಸಾಧನೆಯಾಗಿಲ್ಲ. ವೈಯಕ್ತಿಕವಾಗಿ ಕೆಲವರಿಗೆ ಲಾಭ ಆಗಿರಬಹುದು ಎಂದು ತಿಳಿಸಿದರು.
ಪ್ರಧಾನಿ ರಾಜ್ಯಕ್ಕೆ ಬಂದರೆ ಸ್ವಾಗತಿಸುತ್ತೇವೆ. ಮೆಟ್ರೋ ಯೋಜನೆ ರಾಜ್ಯ ಸರ್ಕಾರದ ಕಾರ್ಯಕ್ರಮ. ಯಾರು ಹೆಚ್ಚು ಅನುದಾನ ನೀಡಿದ್ದಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಕಾಂಗ್ರೆಸ್ ಸರ್ಕಾರದ ಮೈಲೇಜ್ ಹೆಚ್ಚಿದ್ದರೂ ಕೇಂದ್ರದ ಪಾಲು ಕಡಿಮೆ. ಆದರೂ ಮೊದಲಿನಿಂದಲೂ ಮೋದಿ ಅವರಿಗೆ ಫ್ರೀಯಾಗಿ ಮೈಲೇಜ್ ಸಿಗುತ್ತಿದೆ ಎಂದು ಬೇಸರಿದರು.
ಒಳಮೀಸಲಾತಿ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಸರ್ವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿಎಂ ಅನುಷ್ಠಾನಗೊಳಿಸಲಿದ್ದಾರೆ ಎಂದು ಭರವಸೆ ನೀಡಿದರು.