ಚಿತ್ರದುರ್ಗ: ಕೋಟೆನಗರಿಯಲ್ಲಿ ನಡೆದ ದತ್ತಿನಿಧ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳ ನೂರಾರು ಪತ್ರಕರ್ತರು ಸಾಕ್ಷಿಯಾದರು. ಇದೇ ವೇಳೆ ದತ್ತಿನಿಧಿ, ವಿಶೇಷ ಸೇರಿ 26 ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಸ್‌ಆರ್‌ಎಸ್ ಕಾಲೇಜು ಆವರಣದ ಡಾ.ಬಿ.ವಿ.ವೈಕುಂಠರಾಜು ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯ ಮತ್ತು ಜಿಲ್ಲಾ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪಿ.ಸಾಯಿನಾಥ್ ಉದ್ಘಾಟಿಸಿದರು.
ನಂತರ ಸಾಯಿನಾಥ್ ಮಾತನಾಡಿ, ವಿಶ್ವದ ಮಾಧ್ಯಮ ಸ್ವಾತಂತ್ರೃ ಸೂಚ್ಯಾಂಕವನ್ನು 180 ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಯುಪಿಎ ಹಾಗೂ ಎನ್‌ಡಿಎ ಅವಧಿಯಲ್ಲಿ ಕುಸಿದಿದೆಯೇ ಹೊರತು ಮೇಲೇರಿಲ್ಲ ಎಂದು ಬೇಸರಿಸಿದರು.
ಸರ್ಕಾರದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅದಾನಿ, ಅಂಬಾನಿ, ಬಿರ್ಲಾರಂತ ಬೃಹತ್ ಉದ್ಯಮಿಗಳ ಕೈಗೆ ದೇಶದ ಬಹುತೇಕ ಮಾಧ್ಯಮ ಮತ್ತು ಮನೋರಂಜನಾ ಕ್ಷೇತ್ರ ಸಿಲುಕಿರುವ ಪರಿಣಾಮ ಮಾಧ್ಯಮಗಳು ಅಪಾಯದಲ್ಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಫೆ. 11, 12ರಂದು ಹರಿಯಾಣದಲ್ಲಿ ಹೋರಾಟನಿರತ ಸಾವಿರಾರು ರೈತರ ಮೇಲೆ ಡ್ರೋನ್ ಬಳಸಿ ನಡೆದ ದಾಳಿ ಕುರಿತು ದೇಶದ ಪತ್ರಿಕೆಗಳ ಸಂಪಾದಕೀಯದಲ್ಲಿ ವರದಿ ಪ್ರಕಟಿಸದಿರುವುದು ಮಾಧ್ಯಮ ಕ್ಷೇತ್ರಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ವಾಣಿಜ್ಯೀಕರಣ, ಖಾಸಗೀಕರಣ, ರಾಜಕೀಯ ಮಾಲೀಕತ್ವದ ಭರಾಟೆಗೆ ಸಿಲುಕಿ ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕೆಂಬುದನ್ನು ಹಲವು ಮಾಧ್ಯಮಗಳು ಮರೆತಿವೆ. ಪತ್ರಿಕಾ ರಂಗವೂ ಬೆಳೆಯಬೇಕು. ಅಲ್ಲದೆ, ಪತ್ರಕರ್ತರ ವರದಿಗಳು ಸಾಮಾಜಿಕ ಬದಲಾವಣೆಗೆ ಹೆಚ್ಚು ಆದ್ಯತೆ ನೀಡುವಂತಿರಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪತ್ರಿಕೋದ್ಯಮದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತರಾದ ಪ್ರಭುದೇವ ಶಾಸ್ತ್ರಿಮಠ, ಬಿ.ಎಂ.ಬಶೀರ್, ಆರ್.ಜಯಕುಮಾರ್, ವಿಜಯಕುಮಾರ್ ವಾರದ, ಕುಂತಿನಾಥ ಶ್ರೀ ಕಲಮನಿ, ಸಿ.ಕೆ.ಮಹೇಂದ್ರ, ಎನ್.ಬಾಬು, ವಿ.ವೆಂಕಟೇಶ್, ಡಿ.ಆರ್.ಅಶೋಕ್‌ರಾಮ್, ನಾಮದೇವ ವಾಟ್ಕರ್, ಸಿ.ಜಿ.ಮಂಜುಳಾ, ಚಿಕ್ಕಪ್ಪನಹಳ್ಳಿ ಷಣ್ಮುಖ, ಆರ್.ರವಿ, ಮಲ್ಲಿಗೆ ಮಾಚಮ್ಮ, ಶಶಿಕುಮಾರ ಜಿ ಕೆರೂರ, ಕೆ.ಗೋಪಿಕಾ ಮಲ್ಲೇಶ್, ಮೋಹನ ಹೆಗಡೆ, ಮಹೋಹರ ಮಲ್ಲಾಡದ, ಆರ್.ಸಿ.ಪುಟ್ಟರಾಜು, ಸನತ್‌ಕುಮಾರ್ ಬೆಳಗಲಿ, ಎಚ್.ಕೆ.ಬಸವರಾಜು, ಬಿ.ಎಂ.ನಂದೀಶ್ ಸೇರಿ 22ಮಂದಿಗೆ 2023ರ ದತ್ತಿನಿಧಿ ಪ್ರಶಸ್ತಿ, ಶ.ಮಂಜುನಾಥ್, ರವಿ ಮಲ್ಲಾಪುರ, ಎಸ್.ಬಿ.ರವಿಕುಮಾರ್, ಎಚ್.ರಾಮಚಂದ್ರ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ಪತ್ರಕರ್ತ ಬಿ.ವಿ.ಮಲ್ಲಿಕಾರ್ಜುನಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಬಿ.ಸಿ.ಲೋಕೇಶ, ಉಪಾಧ್ಯಕ್ಷರಾದ ಪುಂಡಲೀಕ ಭೀ ಬಾಳೋಜಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಭವಾನಿಸಿಂಗ್ ಠಾಕೂರ್, ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಮ್, ಸೋಮಶೇಖರ ಕೆರಗೋಡು, ನಿಂಗಪ್ಪ ಚಾವಡಿ, ಖಜಾಂಚಿ ವಾಸುದೇವ ಹೊಳ್ಳ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಪ್ರಧಾನ ಕಾರ್ಯದರ್ಶಿ ಎಸ್.ಸಿದ್ಧರಾಜು, ಖಜಾಂಚಿ ಡಿ.ಕುಮಾರಸ್ವಾಮಿ, ಉಪಾಧ್ಯಕ್ಷ ಸಿ.ಪಿ.ಮಾರುತಿ, ಕಾರ್ಯದರ್ಶಿಗಳಾದ ವಿ.ವೀರೇಶ್, ನಾಗರಾಜ ಕಟ್ಟೆ, ಬಿ.ಎಸ್.ವಿನಾಯಕ, ರಾಷ್ಟ್ರೀಯ ಮಂಡಳಿ ಸದಸ್ಯ ಸಿ.ಹೆಂಜಾರಪ್ಪ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಯೋಗೀಶ್ ಇತರರಿದ್ದರು.