ನ್ಯೂಸ್

ರಾಜ್ಯ ಸರ್ಕಾರ ಸತ್ತ ಪ್ರಾಣಿಯಂತಾಗಿದೆ

ಚಿತ್ರದುರ್ಗ: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಸತ್ತ ಪ್ರಾಣಿಯಂತಾಗಿದ್ದು, ಅದನ್ನು ಕಿತ್ತು ತಿನ್ನುವ ರಣ ಹದ್ದಿನಂತೆ ಸಚಿವರು-ಶಾಸಕರು ಕಚ್ಚಾಡುತ್ತಿದ್ದಾರೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಎಂ ಕಾರಜೋಳ ದೂರಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗಿದೆ. ಸಚಿವರಿಗೆ ಕೆಲಸಗಳೇ ಇಲ್ಲದಂತಾಗಿದೆ. ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕವಾಗಿರುವ ಕೆಲ ಶಾಸಕರ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಯಾವುದೇ ಅಭಿವೃದ್ಧಿಯಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಕುರ್ಚಿ ಕಿತ್ತಾಟದಿಂದ ಆಡಳಿತ ಯಂತ್ರ ಕುಸಿದಿದೆ. ಕಾನೂನು ಸುವ್ಯವಸ್ಥೆಯೂ ಹದಗೆಟ್ಟಿದೆ. ರಾಜಕೀಯ ಪರಮಾಧಿಕಾರವನ್ನು ಜಾತಿ ಆಧಾರದ ಮೇಲೆ ಹಂಚುವ ಕೆಲಸ ಎಂದಿಗೂ ಆಗಬಾರದು. ಅರ್ಹತೆ ಮತ್ತು ದಕ್ಷತೆ ಮಾನದಂಡ ಆಗಬೇಕು. ಎಲ್ಲ ವರ್ಗದವರಿಗೂ ರಾಜಕೀಯದಲ್ಲಿ ಅವಕಾಶಗಳು ಸಿಗಬೇಕು ಎಂದು ಪ್ರತಿಕ್ರಿಯಿಸಿದರು.