ರೈತರ ವಿವಿಧ ಬೇಡಿಕೆ ಈಡೇರಿಕೆಗೆ ದೆಹಲಿ ಗಡಿಯಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲ ಪ್ರತಿಭಟನೆಯನ್ನು ಬೆಂಬಲಿಸಿ ಭಾನುವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನಾ ಟ್ರಾಕ್ಟರ್ ರ‌್ಯಾಲಿ ನಡೆಯಿತು.
ನಗರದ ಎಪಿಎಂಸಿ ರಿಂಗ್ ರೋಡ್ ಸಿಗ್ನಲ್ ವೃತ್ತದಲ್ಲಿ ಆರಂಭವಾದ ರ‌್ಯಾಲಿಯು ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಕಡಕೋಳ ಬಳಿ ಇರುವ ಟೋಲ್ ತನಕ ನಡೆಯಿತು. ಬಳಿಕ ಅರ್ಧ ಗಂಟೆ ಕಾಲ ಟೋಲ್ ಬಂದ್ ಮಾಡಿಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು. ಸುಮಾರು 6 ಕಿ.ಮೀ ತನಕ ಎರಡು ಭಾಗದಲ್ಲೂ ರಸ್ತೆಯಲ್ಲಿ ವಾಹನಗಳ ಸಾಲುಗಟ್ಟಿ ನಿಂತು ಸಂಚಾರ ಸಮಸ್ಯೆ ಉಂಟಾಯಿತು.
ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿ ಸಾಲ ಮನ್ನಾ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಲೈವಾಲ ಅವರು ನ.26ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಸತ್ಯಾಗ್ರಹ 62ನೇ ದಿನಕ್ಕೆ ಪೂರೈಸಿದ್ದು, ಕೇಂದ್ರ ಸರ್ಕಾರ ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮನವಿ ಮೇರೆಗೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಚಳುವಳಿಯನ್ನು ಕೈಬಿಟ್ಟಿಲ್ಲ ರೈತರ ಬೇಡಿಕೆ ಈಡೆರುವ ತನಕ ಹೋರಾಟ ಮುಂದುವರಿಸಲು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ದೇಶಾದ್ಯಂತ ಇಂದು ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಟ್ಯಾಕ್ಟರ್ ರಾಲಿ ನಡೆಸಲಾಗಿದೆ. ಮೈಸೂರು ಸೇರಿದಂತೆ ಚಾಮರಾಜನಗರ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರಗಿ, ರಾಯಚೂರು, ಹಾಸನ ಮತ್ತಿತರ ಜಿಲ್ಲೆಗಳಲ್ಲಿ ರ‌್ಯಾಲಿ ನಡೆಸಲಾಗಿದೆ ಎಂದರು.