ನ್ಯೂಸ್

ರಾಜೇಂದ್ರ ಸ್ವಾಮೀಜಿ ಜಯಂತ್ಯುತ್ಸವದ ಸ್ಥಳ ಪರಿಶೀಲನೆ

ಕೊಳ್ಳೇಗಾಲ: ಕೊಳ್ಳೇಗಾಲಕ್ಕೆ ಡಿ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುವ ಹಿನ್ನೆಲೆಯಲ್ಲಿ ಸೋಮವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಅಧಿಕಾರಿಗಳೊಡನೆ ಕಾರ್ಯಕ್ರಮ ನಡೆಸಲು ಗುರುತಿಸಿರುವ ಪಟ್ಟಣದ ನ್ಯಾಷನಲ್ ಶಾಲೆಯ ಮೈದಾನವನ್ನು ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಪಂ ಸಿಇಒ ಮೋನಾರೊತ್, ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಸೀಲ್ದಾರ್ ಬಸವರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾರ್ಯಕ್ರಮ ಪೂರ್ವ ಸಿದ್ಧತೆ ಹಾಗೂ ಕಾರ್ಯಕ್ರಮಕ್ಕೆ ಕೈಗೊಂಡಿರುವ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.

ಗಣ್ಯರಿಗೆ ಊಟೋಪಚಾರ ವ್ಯವಸ್ಥೆ ಬಗ್ಗೆ ಪ್ರಾಂಶುಪಾಲರು ಹಾಗೂ ಅಧಿಕಾರಿಗಳ ಜತೆ ಚರ್ಚಿಸಿದರು. ವಾಹನಗಳ ಪಾರ್ಕಿಂಗ್ ಮಾಡಲು ಮಾಜಿ ಶಾಸಕ ನರೇಂದ್ರ ಅವರ ಮನೆ ಮುಂಭಾಗ ಜಾಗ ಕಲ್ಪಿಸಲಾಗಿದ್ದು, ಅದನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಎಸ್‌ಪಿ ಕವಿತಾ ಅವರಿಗೆ ಸೂಚಿಸಿದರು. ಶಾಸಕ ಎಂ.ಆರ್. ಮಂಜುನಾಥ್, ಸತ್ತೇಗಾಲ ಗ್ರಾಪಂ ಅಧ್ಯಕ್ಷ ಕೆಂಪರಾಜು, ಜಿ.ಪಂ ಸಿಇಒ ಮೊನಾರೊತ್, ಉಪವಿಭಾಗಧಿಕಾರಿ ಬಿ.ಆರ್.ಮಹೇಶ್, ಡಿವೈಎಸ್ಪಿ ಎಂ.ಧಮೇಂದ್ರ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಶ್ರೀಪತಿ, ತಹಸೀಲ್ದಾರ್, ಬಸವರಾಜು ಮತ್ತಿತರಿದ್ದರು ಇದ್ದರು.