ಬೆಂಗಳೂರು: ಅನೈತಿಕ ಸಂಬಂಧ, ಲಾಭದ ಉದ್ದೇಶ ಅಥವಾ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗಳು ನಡೆಯುತ್ತವೆ. ಅದರಲ್ಲೂ ರಾಜಕೀಯ ದ್ವೇಷದಿಂದ ಅತಿ ಹೆಚ್ಚು ಹತ್ಯೆ ನಡೆಯುತ್ತಿವೆ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಕೊಲೆ ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಪೀಠ ಈ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಲು ನ್ಯಾಯಪೀಠ ಮುಂದಾದಾಗ ಆರೋಪಿ ಪರ ವಕೀಲರು, ಅರ್ಜಿದಾರ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ. ಇದೇ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಈಗಾಗಲೆ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಆರೋಪಪಟ್ಟಿಯೂ ಸಲ್ಲಿಕೆಯಾಗಿದೆ. ಅರ್ಜಿದಾರರನ್ನು ಸುಖಾಸುಮ್ಮನೆ ಬಂಧನದಲ್ಲಿರಿಸಲಾಗಿದ್ದು, ಅವರಿಗೆ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ವಕೀಲರನ್ನುದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿಗಳು, ಸುಖಾಸುಮ್ಮನೆ ಯಾರನ್ನೂ ಬಂಧಿಸುವುದಿಲ್ಲ. ಒಂದು ವೇಳೆ ಆ ರೀತಿ ಬಂಧಿಸಿದರೆ ಅದು ಅಕ್ರಮ ಬಂಧನವಾಗುತ್ತದೆ. ಒಬ್ಬ ವ್ಯಕ್ತಿ ಈಗಾಗಲೆ ಮೃತಪಟ್ಟಿದ್ದಾನೆ. ನಾವು ಎಷ್ಟೇ ಪ್ರಯತ್ನ ನಡೆಸಿದರೂ ಆತನನ್ನು ವಾಪಸ್ ಕರೆತರಲು ಸಾಧ್ಯವಿಲ್ಲ. ಕೊಲೆಗಳು ನಡೆಯುವುದೇ ಮೂರು ಕಾರಣಗಳಿಗೆ. ಅನೈತಿಕ ಸಂಬಂಧದ ವಿಚಾರ, ಯಾವುದಾದರೂ ಲಾಭದ ಉದ್ದೇಶ ಅಥವಾ ಮತ್ತಾವುದೋ ದ್ವೇಷದ ಕಾರಣಕ್ಕೆ ಕೊಲೆಗಳು ನಡೆಯುತ್ತಿವೆ. ಅದರಲ್ಲೂ ಹೆಚ್ಚಾಗಿರುವುದು ರಾಜಕೀಯ ದ್ವೇಷ. ಈ ಕಾರಣಗಳು ಇರದಿದ್ದರೆ ಹತ್ಯೆಗಳು ನಡೆಯುವ ಸಾಧ್ಯತೆ ಇಲ್ಲವಲ್ಲ ಎಂದು ನುಡಿಯಿತು.
ಒಬ್ಬ ವ್ಯಕ್ತಿ ತನ್ನ ರಾಜಕೀಯ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿದ್ದರೆ, ಅವನನ್ನೇ ಕೊಲೆ ಮಾಡಿದರೆ ಎಲ್ಲವೂ ಸರಿ ಹೋಗುತ್ತದೆ ಎಂದೆನಿಸಿದರೆ ಸಾಕು. ಕೊಲೆಗಳು ನಡೆದು ಹೋಗುತ್ತವೆ. ಕೊಲೆ ಆರೋಪದಲ್ಲಿ ಜೈಲಿಗೆ ಹೋಗಿ ಹೊರ ಬಂದರೂ ಆರೋಪಿ ಮಾತ್ರ, ನೋಡು ಅವನ ಗತಿ ಏನಾಯಿತು. ಜೈಲಿಗೆ ಹೋಗಿ ಬಂದರೂ ನನಗೇನು ಆಗಲಿಲ್ಲ ಎಂಬುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಾನೆ. ನ್ಯಾಯಾಲಯ ಜಾಮೀನು ನೀಡಿದರೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ ಎನ್ನುತ್ತಾನೆ. ಜಾಮೀನು ಸಿಗದಿದ್ದರೆ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂಬ ರೆಡಿಮೇಡ್ ಉತ್ತರ ಇಟ್ಟುಕೊಂಡಿರುತ್ತಾರೆ ಎಂದು ಹೇಳಿತು.
ಖದರ್ ನೋಡಬೇಕು: ಅರ್ಜಿದಾರ ಈ ಪ್ರಕರಣದಲ್ಲಿ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಭಾಗಿಯಾಗಿದ್ದಾನೆಯೇ ಎನ್ನುವುದು ವಿಚಾರಣೆಯಿಂದ ನಿರ್ಧಾರವಾಗುತ್ತದೆ. ನಮ್ಮ ಮುಂದೆ ಇರುವ ಪ್ರಶ್ನೆ ಎಂದರೆ, ಈ ವ್ಯಕ್ತಿಯನ್ನು ಮತ್ತೆ ಹೊರಗೆ ಬಿಟ್ಟರೆ, ಇಂಥ ಕೃತ್ಯಗಳು ಮರುಕಳಿಸುವ ಸಾಧ್ಯತೆ ಇದೆಯೇ, ಮುಂದೆ ವಿಚಾರಣೆಗೆ ಹಾಜರಾಗುತ್ತಾನೆಯೇ, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುತ್ತಾನೆಯೇ ಎಂಬ ವಿಚಾರಗಳನ್ನಷ್ಟೇ ನೋಡಬೇಕಿದೆ. ಗ್ರಾ.ಪಂ. ಸದಸ್ಯ ಎಂಬ ಕಾರಣಕ್ಕೆ ಆರೋಪಿಗೆ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದೆ ಎನ್ನಲಾಗುವುದಿಲ್ಲ. ಗ್ರಾ.ಪಂ. ಸದಸ್ಯನಾಗಿ ಊರಿನಲ್ಲಿ ಆತನ ಖದರ್ ಏನು? ಅದರಿಂದ ಆತ ಏನೆಲ್ಲ ಮಾಡಬಹುದು ಎನ್ನುವುದನ್ನು ಗಮನಿಸಬೇಕಿದೆ. ಒಬ್ಬ ವ್ಯಕ್ತಿಯ ಕೊಲೆಯಾಗಿದೆ, ಆ ಪರಿಸ್ಥಿತಿಯ ತೀವ್ರತೆ ಹಾಗೂ ಗಂಭೀರತೆ ಗಮನದಲ್ಲಿಕೊಂಡು ಜಾಮೀನು ನೀಡುವ ಬಗ್ಗೆ ನಿರ್ಧರಿಸಬೇಕಾಗುತ್ತದೆ. ಕೇಳಿದ್ದಾರೆ ಎಂದ ಮಾತ್ರಕ್ಕೆ ಜಾಮೀನು ನೀಡುವಂತಾಗಬಾರದು. ಅದಕ್ಕಾಗಿಯೇ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ಅಭಿಯೋಜಕರಿಗೆ ಸೂಚಿಸಲಾಗುತ್ತಿದೆ ಎಂದು ತಿಳಿಸಿದ ಪೀಠ ಅರ್ಜಿ ವಿಚಾರಣೆಯನ್ನು ಮಾ.18ಕ್ಕೆ ಮುಂದೂಡಿತು.
ಗ್ರಾಪಂಗಳಲ್ಲಿ ರಾಜಕೀಯಕ್ಕೆ ಬೇಸರ: ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ವಿಧಾನಸೌಧದವರೆಗೂ ಬರಬಾರದು ಎಂಬ ಉದ್ದೇಶದಿಂದ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳನ್ನು ರೂಪಿಸಲಾಯಿತು. ತೆರಿಗೆ ಹಣವನ್ನು ಗ್ರಾ.ಪಂ.ಗೆ ನೀಡಿ, ಜನ ತಮಗೆ ಅನುಕೂಲವಾಗುವಂತೆ ಸ್ವತಂತ್ರವಾಗಿ ಗ್ರಾಮವನ್ನು ಮುನ್ನೆಡೆಸಿಕೊಂಡು ಹೋಗಬೇಕು ಎಂಬುದು ಪಂಚಾಯಿತಿ ರೂಪಿಸಿದ ಹಿಂದಿನ ಮಹತ್ವಾಕಾಂಕ್ಷೆಯಾಗಿದೆ. ಇದೇ ಕಾರಣಕ್ಕೆ ಗ್ರಾಮ ಪಂಚಾಯಿತಿಯಿಂದ ರಾಜಕೀಯ ಪಕ್ಷವನ್ನು ದೂರವಿಡಲಾಗಿದೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷವನ್ನು ಓಲೈಸಿಯೇ ಗ್ರಾ.ಪಂ. ಚುನಾವಣೆಗೆ ಅಭ್ಯರ್ಥಿ ನಿಲ್ಲುವಂತಾಗಿದೆ. ಅಭ್ಯರ್ಥಿಯೇ ಬಹಿರಂಗವಾಗಿ ತಾನು ಇಂಥವರ ಬೆಂಬಲಿತ ಎಂದು ಹೇಳಿಕೊಳ್ಳುತ್ತಾನೆ. ಗ್ರಾಮದ ಹೆಬ್ಬಾಗಿನಲ್ಲಿ ಗ್ರಾಮ ದೇವತೆಯ ಫೋಟೋ ಇಲ್ಲದಿದ್ದರೂ ಗ್ರಾ.ಪಂ. ಸದಸ್ಯನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಆಳೆತ್ತರದ ಫ್ಲೆಕ್ಸ್ಗಳಿರುತ್ತವೆ. ಅದರಲ್ಲಿ ತನ್ನ ರಾಜಕೀಯ ಪಕ್ಷದ ವರಿಷ್ಠರ ಫೋಟೋಗಳಿರುತ್ತವೆ ಎಂದು ಬೇಸರ ವ್ಯಕ್ತಪಡಿಸಿತು.