ಶಿವಮೊಗ್ಗದಲ್ಲಿ ಎಬಿವಿಪಿ ದಕ್ಷಿಣ ಪ್ರಾಂತ 44ನೇ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ನಟ, ನಿರ್ದೇಶಕ ಎಸ್.ಎನ್.ಸೇತುರಾಮ್ ಮಾತನಾಡಿದರು. ಡಾ. ರವಿ ಮಂಡ್ಯ, ಸತೀಶ್ ಮೇತ್ರಿ, ಎಚ್.ಕೆ.ಪ್ರವೀಣ್ ಇದ್ದರು. 
ನ್ಯೂಸ್

ರಾಜಕಾರಣದಲ್ಲಿ ಲೂಟಿಕೋರರನ್ನು ದೂರವಿಡಿ

ಶಿವಮೊಗ್ಗ: ಇಂದು ಪ್ರತಿಯೊಬ್ಬರಿಗೂ ರಾಜಕಾರಣದ ಅರಿವು ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ರಾಜಕಾರಣದ ಅರಿವಿದ್ದರೆ ಒಳ್ಳೆಯದು. ಆದರೆ ಬದುಕಿಗೆ ರಾಜಕಾರಣವೇ ಮುಖ್ಯವಲ್ಲ. ಅದರಲ್ಲೂ ವಿದ್ಯಾರ್ಥಿ ಜೀವನದಲ್ಲಿ ರಾಜಕಾರಣ ಸಲ್ಲದು ಎಂದು ನಟ, ನಿರ್ದೇಶಕ ಎಸ್.ಎನ್.ಸೇತುರಾಮ್ ಹೇಳಿದರು.

ನಗರದ ಅಲ್ಲಮಪ್ರಭು ಮೈದಾನದಲ್ಲಿ ಭಾನುವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ 44ನೇ ಸಮ್ಮೇಳನದ ಮೂರನೇ ದಿನದ ಎರಡನೇ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಸಿದ್ಧಾಂತಗಳು ನೂರಾರಿವೆ. ಅದರಲ್ಲಿ ಯಾವುದು ಮುಖ್ಯ ಎಂಬುದನ್ನು ನಾವೇ ಮನವರಿಕೆ ಮಾಡಿಕೊಳ್ಳಬೇಕು ಎಂದರು.

ಇಡೀ ದೇಶವನ್ನು ಪರಿವರ್ತನೆ ಮಾಡಬೇಕಿಲ್ಲ. ಜನಸ್ತೋಮದ ಮನಸ್ಥಿತಿ ಬದಲಿಸಬೇಕಿದೆ. ಸಮಾಜವನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ನಮ್ಮನ್ನು ದೋಚಿದವರು, ಲೂಟಿ ಮಾಡಿದವರು, ಆಕ್ರಮಣ ಮಾಡಿದವರನ್ನು ರಾಜಕಾರಣದಿಂದ ದೂರವಿಡಬೇಕು. ಈಗ ಪಟ್ಟಕ್ಕೆ ಕುಳಿತವರೂ ಅದೇ ರೀತಿ ನಡೆದುಕೊಳ್ಳುತ್ತಿದ್ದರೆ ಅವರನ್ನೂ ದೂರ ಇಡುವ ಸಾಮರ್ಥ್ಯ ಯುವಶಕ್ತಿಗಿದೆ ಎಂದು ಹೇಳಿದರು.

ದೇಶ, ಚರಿತ್ರೆ ಬಗ್ಗೆ ಸಾಕಷ್ಟು ಮಾತನಾಡುತ್ತೇವೆ, ಓದುತ್ತೇವೆ, ಬರೆಯುತ್ತೇವೆ. ಆದರೆ ನಾವು ಬರೆಯಬೇಕಾಗಿದ್ದು, ಓದಾಬೇಕಾಗಿದ್ದು ಬೇರೆ ಚರಿತ್ರೆಯೇ ಇದೆ. ಹಲವು ದಶಕಗಳಿಂದ ಗೋಡೆ, ಕಾಂಪೌಂಡ್‌ಗಳಿಗೆ ಪೋಸ್ಟರ್ ಅಂಟಿಸುತ್ತಿದ್ದ ಕಾರ್ಯಕರ್ತರು ಇಂದಿಗೂ ಸಾಮಾನ್ಯ ಕಾರ್ಯಕರ್ತರಾಗಿಯೇ ಉಳಿದಿದ್ದಾರೆ. ಆದರೆ ಪೋಸ್ಟರ್‌ನಲ್ಲಿದ್ದವರು ಅಧಿಕಾರ ಹಿಡಿದು ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಮೈಸೂರಿನ ಸತೀಶ್ ಮೇತ್ರಿ ಅವರಿಗೆ ಯುವ ಪುರಸ್ಕಾರ ಪ್ರದಾನ ಮಾಡಲಾಯಿತು. ಮಂಗಳೂರಿನ ಡಾ. ಕೇಶವ್ ಬಂಗೇರ ಸಂವಿಧಾನದ ಪೀಠಿಕೆ ಬೋಧಿಸಿದರು. ಪ್ರಾಂತ ಅಧ್ಯಕ್ಷ ಡಾ. ರವಿ ಮಂಡ್ಯ, ಕಾರ್ಯದರ್ಶಿ ಎಚ್.ಕೆ.ಪ್ರವೀಣ್ ಉಪಸ್ಥಿತರಿದ್ದರು.