ಪಿರಿಯಾಪಟ್ಟಣ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸುವ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಹಾಗೂ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಸರ್ಕಾರದ ನಿಯಮಾನುಸಾರ ಖರೀದಿ ಪ್ರಕ್ರಿಯೆ ನಡೆಸಬೇಕು ಎಂದು ಶಾಸಕ ಕೆ. ಮಹದೇವ್ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಭತ್ತ ಖರೀದಿಗೆ ಚಾಲನೆ ನೀಡಿ ಮಾತನಾಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಬೆಳೆಯುವ ಜೋಳ ಹಾಗೂ ಮೈಸೂರು ಪ್ರಾಂತ್ಯದಲ್ಲಿ ಬೆಳೆಯುವ ರಾಗಿಯನ್ನು ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸುವ ಪ್ರಕ್ರಿಯೆಯಲ್ಲಿ ಹಲವು ವ್ಯತ್ಯಾಸಗಳಿದ್ದು, ಈ ಸಂಬಂಧ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರೊಂದಿಗೆ ಚರ್ಚಿಸುತ್ತೇನೆ. ಮುಂಬರುವ ಅಧಿವೇಶನದಲ್ಲಿಯೂ ರಾಗಿ ಖರೀದಿಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಲು ಒತ್ತಾಯಿಸುತ್ತೇನೆ ಎಂದರು.
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮಾರಾಟ ಮಂಡಳಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ್ ಪಾಟೀಲ್ ಮಾತನಾಡಿ, ರೈತರು ರಾಗಿ ಮಾರಾಟದ ಸಂದರ್ಭ ಸರ್ಕಾರದ ನಿಯಮಗಳನ್ನು ಪಾಲಿಸಿ ಪ್ರಸಕ್ತ ಸಾಲಿನಲ್ಲಿ ಬೆಳೆದಿರುವ ರಾಗಿ ಮಾರಾಟ ಮಾಡಬೇಕು. ನಾವು ಮಾರಾಟ ಮಾಡಿದ ರಾಗಿ ಮತ್ತೆ ನಮ್ಮ ಆಹಾರದ ಉಪಯೋಗಕ್ಕಾಗಿ ಸಿಗುವುದರಿಂದ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.
ಖರೀದಿ ಸಂದರ್ಭ ಸರ್ಕಾರದ ನೂತನ ಆದೇಶಗಳ ಪ್ರಕಾರ ರೈತರು ಇಲಾಖೆ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ತಿಳಿಸಿದರು.
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮಾರಾಟ ಮಂಡಳಿ ಉಪ ಪ್ರಧಾನ ವ್ಯವಸ್ಥಾಪಕ ಸಿದ್ದನಾಯಕ, ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಎಪಿಎಂಸಿ ಕಾರ್ಯದರ್ಶಿ ರೇವತಿಬಾಯಿ, ಕೃಷಿ ಅಧಿಕಾರಿ ಮಹೇಶ್, ಖರೀದಿ ಅಧಿಕಾರಿ ಮಂಜುನಾಥ್, ಆಹಾರ ನಿರೀಕ್ಷಕ ಸಂದೀಪ್, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮುಖಂಡರಾದ ರಘುನಾಥ್, ಜವರಪ್ಪ, ಬಸವರಾಜೆ ಅರಸ್, ನದೀಮ್ ಪಾಷ, ಬಿ.ವಿ.ಗಿರೀಶ್, ಬೆಂಗಳೂರಿನ ಜಿಕೆವಿಕೆಯ ಎಂಎಸ್ಸಿ ಅಗ್ರಿಕಲ್ಚರಲ್ ಮಾರ್ಕೆಟಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಮತ್ತಿತರರಿದ್ದರು.