ನ್ಯೂಸ್

ರಸ್ತೆಗಳ ಅಭಿವೃದ್ಧಿಗೆ ೧೫ ಕೋಟಿ ಅನುದಾನ / ಕಾಮಗಾರಿಗಳ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಸೂಚನೆ

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ೧೫ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳ ಪಟ್ಟಿಯನ್ನು ಕೂಡಲೇ ಕೊಡುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಮಮೂರ್ತಿ ಅವರಿಗೆ ಶಾಸಕ ಕೊತ್ತೂರು ಮಂಜುನಾಥ್ ಸೂಚನೆ ನೀಡಿದರು.

ನಗರದ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿ, ಮಳೆಯಿಂದ ಗ್ರಾಮೀಣ ಪ್ರದೇಶಗಳಲ್ಲಿನ ಮುಖ್ಯರಸ್ತೆಗಳು ಹಾಳಾಗಿದ್ದು, ಕೂಡಲೇ ರಸ್ತೆಗಳ ದುರಸ್ತಿ ಕಾರ್ಯ ಆರಂಭಿಸಲು ಕ್ರಿಯಾ ಯೋಜನೆ ರೂಪಿಸಬೇಕು. ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಬೇಕು ಮುಂದೆ ಬಾಕಿ ಉಳಿದಿರುವ ರಸ್ತೆಗಳನ್ನು ಹಂತಹAತವಾಗಿ ಪೂರ್ಣಗೊಳಿಸಬೇಕು. ಅದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರು ರಸ್ತೆಗಳ ಅಭಿವೃದ್ಧಿಗೆ ಗುದ್ದಲಿಪೂಜೆಗೆ ಬರಲಿದ್ದಾರೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಯಾಗಿಲ್ಲದ ಮತ್ತು ವಾಹನ, ಸಾರ್ವಜನಿಕ ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಗಳ ಬಗ್ಗೆ ಮಾಹಿತಿ ನೀಡಬೇಕು ಶೀಘ್ರದಲ್ಲೇ ಹಂತ ಹಂತವಾಗಿ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದರು.

ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುವಂತೆ ಸರ್ಕಾರಕ್ಕೆ ಒತ್ತಡ ತಂದಿದ್ದೇನೆ. ಕೊಡಲಿಕ್ಕೂ ಸರ್ಕಾರ ಬದ್ದವಾಗಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಕ್ರಿಟ್ ರಸ್ತೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಗುವುದು ಎಂದರು. ಕ್ಷೇತ್ರದ ಅಭಿವೃದ್ದಿಗೆ ಮತ್ತಷ್ಟು ಶ್ರಮಿಸಲಾಗುವುದು ಎಂದರು.

ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕಾಗಿಲ್ಲ :
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರ ಇಲ್ಲ. ಇದರಲ್ಲಿ ವಿರೋಧ ಪಕ್ಷಗಳು ರಾಜಕಾರಣ ಮಾಡುತ್ತಿದ್ದಾರೆ. ಅವರು ತಪ್ಪು ಮಾಡಿದ್ದರೆ ತನಿಖಾ ಸಂಸ್ಥೆಗಳ ಮೂಲಕ ತನಿಖೆ ಮಾಡಿಸಬಹುದು. ಸಿದ್ದರಾಮಯ್ಯನವರನ್ನು ಮುಡಾ ಹಗರಣದಲ್ಲಿ ಸಿಲುಕಿಸುವ ಪಾತ್ರ ಕಾಂಗ್ರೇಸ್‌ನವರಲ್ಲಿ ಇಲ್ಲ. ನಾವು ಅವರ ಬೆಂಬಲಕ್ಕಾಗಿ ನಿಲ್ಲುತ್ತೇವೆ. ಅವರು ಯಾವುದೇ ತಪ್ಪು ಮಾಡಿಲ್ಲ. ರಾಜೀನಾಮೆ ನೀಡುವ ಅವಶ್ಯಕತೆಯೂ ಇಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ಸಮರ್ಥನೆ ಮಾಡಿಕೊಂಡರು.

ಸರ್ಕಾರದ ಮತ್ತು ಮುಖ್ಯಮಂತ್ರಿಗಳ ವರ್ಚಸ್ಸಿಗೆ ಧಕ್ಕೆ ಇಲ್ಲ :
ಶಾಸಕರು ಮಾಧ್ಯಮಗಳೊಂದಿಗೆ ಮಾತನಾಡಿ, ಸುಪ್ರೀಂ ಕೋರ್ಟಿನಲ್ಲಿ ೨೫ ಲಕ್ಷ ದಂಡ ಕಟ್ಟಿದ ಅಬ್ರಾಹಿಂ ಎಂಬ ವ್ಯಕ್ತಿ ದೂರು ನೀಡಿದ್ದಕ್ಕೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ರಾಜಕೀಯ ಪ್ರೇರಿತವಾಗಿದೆ. ಮುಖ್ಯಮಂತ್ರಿಗಳು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಅವರು ಜಮೀನು ನೀಡಿದ್ದಕ್ಕೆ ಮುಡಾದವರು ಕಾನೂನು ಬದ್ಧವಾಗಿಯೇ ನಿವೇಶನಗಳನ್ನು ನೀಡಿದ್ದಾರೆ. ಅದರಲ್ಲೂ ಬಿಜೆಪಿ ಸರ್ಕಾರದಲ್ಲಿ ಅವರಿಗೆ ನಿವೇಶನ ನೀಡಿರುವುದು. ಇದರಿಂದ ಮುಖ್ಯಮಂತ್ರಿಗಳಿಗಾಗಲೀ ಸರ್ಕಾರಕ್ಕಾಗಲೀ ಯಾವುದೇ ಧಕ್ಕೆ ಇಲ್ಲ. ನಾವು ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.

ರಾಜ್ಯಪಾಲರ ನಿಲುವಿಗೆ ಖಂಡನೆ :
ಮುಖ್ಯಮಂತ್ರಿಗಳ ಮೇಲೆ ಖಾಸಗಿ ವ್ಯಕ್ತಿ ನೀಡಿರುವ ದೂರನ್ನು ಪರಿಶೀಲಿಸದೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸುತ್ತೇನೆ. ಸರ್ಕಾರವನ್ನು ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸರ್ಕಾರ ಸುಭದ್ರವಾಗಿದೆ. ಅಭಿವೃದ್ಧಿ ದೃಷ್ಟಿಯಲ್ಲಿ ಎಲ್ಲಾ ಶಾಸಕರು ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಆಯಾ ಕ್ಷೇತ್ರಕ್ಕೆ ಅಭಿವೃದ್ದಿಗಾಗಿ ಕೇಳಿದಷ್ಟು ಹಣ ನೀಡುತ್ತಿದ್ದಾರೆ. ಇದರಲ್ಲಿ ತಾರತಮ್ಯ ಇಲ್ಲ. ಕಾಂಗ್ರೇಸ್ ಶಾಸಕರಿಗೆಂದು ಪ್ರತ್ಯೇಕ ಹಣ ನೀಡುತ್ತಿಲ್ಲ. ಕೋಲಾರ ಅಭಿವೃದ್ಧಿಗಾಗಿ ಕೇಳಿದಷ್ಟು ಹಣ ನೀಡುತ್ತಿದ್ದಾರೆ. ಪ್ರತಿ ಶುಕ್ರವಾರ ಮುಖ್ಯಮಂತ್ರಿಗಳನ್ನು ಕಂಡು ಬರುತ್ತೇನೆ. ನಾವು ಕಾಣಿಸಿ ಬಂದರೆ ಸಾಕು ಅವರಿಗೆ ನಾವು ಮೊದಲು ಕೊಟ್ಟ ಮನವಿಯನ್ನು ನೋಡಿ ಹಂತಹAತವಾಗಿ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದರು.

ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಎಇಇ ಮಂಜುನಾಥ್, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಛತ್ರಕೋಡಿಹಳ್ಳಿ ಮಂಜುನಾಥ್, ಖಾದ್ರಿಪುರ ಬಾಬು, ಚಂಜಿಮಲೆ ಮುನೇಶ್, ಮೋಹನ್, ಮುಂತಾದವರು ಇದ್ದರು

ಚಿತ್ರ ೧೭ ಕೆ.ಎಲ್.ಆರ್. ೦೫ : ಕೋಲಾರ ಕ್ಷೇತ್ರದ ರಸ್ತೆಗಳ ಅಭಿವೃದ್ಧಿ ಬಗ್ಗೆ ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವ ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ. ಅನಿಲ್ ಕುಮಾರ್ ಮುಂತಾದವರಿದ್ದಾರೆ.