ನ್ಯೂಸ್

ರಸ್ತೆ ಸಂಚಾರ ತಡೆದು ರೈತರಿಂದ ಪ್ರತಿಭಟನೆ

ಶ್ರೀರಂಗಪಟ್ಟಣ-ಕುಶಾಲನಗರ ಎಕ್ಸ್‌ಪ್ರೆಸ್ ಹೈವೆ ಶ್ರೀರಂಗಪಟ್ಟಣ ತಾಲೂಕು ಹುಲಿಕೆರೆ ಗ್ರಾಮ ಪಂಚಾಯಿತಿಯ ಅವ್ವೇರಹಳ್ಳಿ ಮೂಲಕ ಹಾದುಹೋಗಲಿದ್ದು, ಈ ಭಾಗದ 8 ಗ್ರಾಮಗಳ ಸಂಪರ್ಕ ರಸ್ತೆಗಳು ಕಡಿತವಾಗುತ್ತಿವೆ. ಕೂಡಲೇ ಕೆಳ ಸೇತುವೆ ನಿರ್ಮಿಸಿ ಸಂಕರ್ಪ ಕಲ್ಪಿಸಬೇಕೆಂದು ಆಗ್ರಹಿಸಿ ಅವೇರಹಳ್ಳಿ ಮತ್ತು ಸುತ್ತಮುತ್ತಲಿನ ರೈತರು ಗುರುವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿ ನಂ.275ರಲ್ಲಿ ನಿರ್ಮಿಸುತ್ತಿರುವ ಶ್ರೀರಂಗಪಟ್ಟಣ-ಕುಶಾಲನಗರ ಎಕ್ಸ್‌ಪ್ರೆಸ್ ಹೈವೆ ರಸ್ತೆ ಅವೇರಹಳ್ಳಿ ಮೂಲಕ ಹಾದು ಹೋಗುತ್ತಿದೆ. ಇದರಿಂದ ಇಲ್ಲಿ ಈಗಾಗಲೇ ಸುಮಾರು 60 ವರ್ಷಗಳ ಹಳೆಯದಾದ 40 ಅಡಿ ಸಂಪರ್ಕ ರಸ್ತೆ ಕಡಿತಗೊಳ್ಳಲಿದೆ. ಇದರಿಂದ ಈ ಭಾಗದ ಹುಲಿಕೆರೆ, ಅವೇರಹಳ್ಳಿ, ಹೊಸಹುಂಡಿ, ಸಂಕಳ್ಳಿಕೊಪ್ಪಲು ಮತ್ತು ಮೈದನಹಳ್ಳಿ ಸೇರಿದಂತೆ 5 ಗ್ರಾಮಗಳ ಸುಮಾರು ಐದು ಸಾವಿರ ಎಕರೆ ವ್ಯವಸಾಯದ ಭೂಮಿಗೆ ಹೋಗುವ ಸಂಪರ್ಕ ರಸ್ತೆ ಕಡಿತವಾಗಲಿದ್ದು, ಸಾವಿರಾರು ರೈತರಿಗೆ ಅನನುಕೂಲ ಉಂಟಾಗಲಿದೆ ಎಂದು ಕಿಡಿಕಾರಿದರು.

ಈಗ ನಿರ್ಮಾಣವಾಗುತ್ತಿರುವ ಎಕ್ಸ್‌ಪ್ರೆಸ್ ಹೈವೆ ಈ 40 ಅಡಿ ರಸ್ತೆಯ ಮೂಲಕ ಹಾದು ಹೋಗುತ್ತಿದ್ದು, ಗ್ರಾಮಸ್ಥರಿಗೆ ತಮ್ಮ ಜಮೀನಿನ ಸಂಪರ್ಕವನ್ನು ಕಡಿತಗೊಳಿಸುತ್ತಿದೆ. ಹಾಗಾಗಿ, ಇಲ್ಲಿನ ಗ್ರಾಮಸ್ಥರು ತಮ್ಮ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಸಂಪರ್ಕ ರಸ್ತೆ ಇಲ್ಲದೆ ತೊಂದರೆ ಅನುಭವಿಸುವಂತಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ರೈತರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.

ಅವೇರಹಳ್ಳಿ ಗ್ರಾಮದ ಬಳಿ ಕೆಳಸೇತುವೆ ನಿರ್ಮಾಣ ಮಾಡಿಸಿ ಗ್ರಾಮಸ್ಥರ ಜಮೀನಿಗೆ ಸಂಪರ್ಕ ಕಲ್ಪಿಸಿಕೊಡಬೇಕು. ಇಲ್ಲದಿದ್ದಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ರೈತರು ನಿರಂತರ ಪ್ರತಿಭಟನೆ ನಡೆಸಬೇಕಾಗುತ್ತದೆ. ಈ ಹಿಂದೆಯೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಳ್ಳದೆ ರೈತರ ಬಗ್ಗೆ ನಿರ್ಲಕ್ಷೃ ತೋರುತ್ತಿದ್ದಾರೆ. ಈ ಬಾರಿ ಕೆಳ ಸೇತುವೆ ನಿರ್ಮಾಣಕ್ಕೆ ಮುಂದಾಗದಿದ್ದರೆ ನಾವು ಐದೂ ಗ್ರಾಮದ ರೈತರು ಒಗ್ಗೂಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಹುಲಿಕೆರೆ ವೈರಮುಡಿಗೌಡ, ಇಲವಾಲ ಶಿವೇಗೌಡ, ಹಲಗೇಹುಂಡಿ ಮಹದೇವು, ಮೈಸೂರು ಕೃಷ್ಣ, ಮಹೇಶ, ನವೀನ್, ಯಶವಂತ, ಶಿವಾಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.