ಬೀರೂರು: ಬೀರೂರು-ಲಿಂಗದಹಳ್ಳಿ ರಸ್ತೆಯು ದ್ವಿಪಥ ಮತ್ತು ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆಯಿಂದ ಅಭಿವೃದ್ಧಿ ಹೊಂದುತ್ತಿದೆ. ಆದರೆ ರಸ್ತೆ ವಿಸ್ತರಣೆ ಮಾಡುವಲ್ಲಿ ಅಧಿಕಾರಿಗಳು ಖಾಸಗಿ ಅವರ ಹಿತಾಸಕ್ತಿ ಬಯಸಿ ತಾರತಮ್ಯ ಎಸಗುತ್ತಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಬೀರೂರಿನಿಂದ ಲಿಂಗದಹಳ್ಳಿ ಮೂಲಕ ಕಲ್ಲತ್ತಿಗಿರಿ, ದತ್ತಪೀಠ ಹಾಗೂ ಕೆಮ್ಮಣ್ಣುಗುಂಡಿಗೆ ಸಂಪರ್ಕಿಸುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯಿಂದ ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸಿ ರಸ್ತೆ ಮಧ್ಯೆಯಿಂದ ಎರಡೂ ಬದಿಯಲ್ಲಿ 7.05 ಮೀ. ಅಗಲೀಕರಣಗೊಳಿಸಿ 470 ಮೀ. ಅಭಿವೃದ್ಧಿಪಡಿಸುವ ಕಾಮಗಾರಿಗೆ ಏಪ್ರಿಲ್‌ನಲ್ಲಿ ಶಾಸಕ ಕೆ.ಎಸ್.ಆನಂದ್ ಗುದ್ದಲಿಪೂಜೆ ನೆರವೇರಿಸಿದ್ದರು.
ರಸ್ತೆ ವಿಸ್ತರಣೆಗೆ ಮುಂದಾದ ಗುತ್ತಿಗೆದಾರ ರಸ್ತೆ ಅಕ್ಕಪಕ್ಕದಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವು ಮಾಡಿದರು. ಆದರೆ ರಸ್ತೆ ಒತ್ತುವರಿ ಮಾಡಿ ನಿರ್ಮಿಸಿರುವ ಅಂಗಡಿ, ಮನೆಗಳನ್ನು ತೆರವು ಮಾಡುವಲ್ಲಿ ವಿಲರಾದರು. ರಸ್ತೆ ಪಕ್ಕದಲ್ಲಿ ಕೆಲ ಅಡಿಯಷ್ಟು ಮಣ್ಣನ್ನು ಅಗೆದು ಅಲ್ಲಿ ಜಲ್ಲಿ ಮೆಟ್ಲಿಂಗ್ ಮಾಡಿದ್ದಾರೆ. ಮೆಟ್ಲಿಂಗ್ ಪಕ್ಕಕ್ಕೆ ಅಮೃತ್ 2 ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಅನ್ನು ಅಳವಡಿಸಲಾಗುತ್ತಿದೆ. ಭಗೀರಥ ವೃತ್ತದ ಬಳಿಯಲ್ಲಿ ಅಗಲೀಕರಣ ಸರಿಯಾದ ಅಳತೆಯಲ್ಲಿ ಮಾಡದೆ ವಿದ್ಯುತ್ ಕಂಬಗಳನ್ನು ಮಾತ್ರ ತೆರವು ಮಾಡಿ ಪಕ್ಕಕ್ಕೆ ಇರಿಸಿದ್ದು ಬಿಟ್ಟರೆ ರಸ್ತೆ ಅಗಲೀಕರಣ ಸರಿಯಾದ ಅಳತೆಯಲ್ಲಿ ಮಾಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಸ್ನೇಹಕೂಟ ಗೆಳೆಯರ ಬಳಗದ ಅಧ್ಯಕ್ಷ ತಿಪ್ಪೇಶ್ ಮಾತನಾಡಿ, ಒಟ್ಟು ರಸ್ತೆ ಅಗಲೀಕರಣವು ಎರಡೂ ಬದಿ 15 ಮೀಟರ್‌ನಲ್ಲಿ ಆಗಬೇಕಿದೆ. ನಂತರ ರಸ್ತೆ ಪಕ್ಕಕ್ಕೆ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಬೇಕು. ಇದಾದ ನಂತರ ಚರಂಡಿಗೆ ಜಾಗ ಮೀಸಲು ಇರಿಸಿಕೊಳ್ಳಬೇಕು. ಆದರೆ ಈ ಯಾವ ನಿಬಂಧನೆಗಳನ್ನೂ ಪಾಲಿಸದೆ ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದು, ಕೆಲವೊಂದು ಮನೆಗಳು, ಅಂಗಡಿಗಳಿಗೆ ರಸ್ತೆ ಅಗಲೀಕರಣದಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಇಲ್ಲಿ ಅಮೃತ್ 2 ಯೋಜನೆ ಪೈಪ್‌ಲೈನ್, ಪಕ್ಕದಲ್ಲಿ ಚರಂಡಿ ನಿರ್ಮಿಸಬೇಕು. ಆದರೆ ಅಲ್ಲಿ ಜಾಗವೇ ಇಲ್ಲ. ಈಗ ಮಾಡುತ್ತಿರುವ ಕುಡಿಯುವ ನೀರಿನ ಪೈಪ್‌ಲೈನ್ ವಿಸ್ತರಣೆಯಾದ ರಸ್ತೆಯ ಮಧ್ಯಕ್ಕೆ ಸೇರುತ್ತದೆ. ಮುಂದೊಂದು ದಿನ ಪೈಪ್ ಡ್ಯಾಮೇಜ್ ಆದರೆ ಪುನಃ ರಸ್ತೆಯನ್ನು ಕಿತ್ತು ಹಾಳುಗೆಡವುತ್ತಾರೆ. ಇದೆಂಥ ಅಭಿವೃದ್ಧಿ ಕಾರ್ಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನಾಮ ನಿರ್ದೇಶಿತ ಸದಸ್ಯರಾದ ಕಾಂತರಾಜ್, ಎಂ.ಎಲ್.ಮೋಹನ್‌ಕುಮಾರ್, ಮುಖಂಡರಾದ ಮಧು ಬಾವಿಮನೆ, ಪ್ರಕಾಶ್, ಚಂದ್ರು, ಪ್ರವೀಣ್, ಶಿವಮೂರ್ತಿ, ಕೆಂಚಪ್ಪ, ರವಿ, ಆನಂದ್, ಪ್ರಭು, ರಮೇಶ್ ಇದ್ದರು.