ಆಯನೂರು: ಕೂಲಿ ಕೆಲಸ ಮಾಡುತ್ತಿದ್ದ ಯುವಕ ಹೊಸ ಬದುಕಿನ ಕನಸು ಕಟ್ಟಿದ್ದ. ಅದೇ ಉತ್ಸಾಹದಲ್ಲಿ ಹೊಸದಾಗಿ ಬಟ್ಟೆ ವ್ಯಾಪಾರ ಮಾಡಲೆಂದು ಹಳ್ಳಿಯಿಂದ ಪೇಟೆಗೆ ಹೋಗಿ, ಹೋಲ್‌ಸೆಲ್ ಆಗಿ ಬಟ್ಟೆ ಖರೀದಿಸಿ ಮರಳಿ ತನ್ನೂರಿಗೆ ತೆರಳುತ್ತಿದ್ದಾಗ ವಿಧಿಯಾಟಕ್ಕೆ ಬಲಿಯಾಗಿದ್ದಾನೆ. ಇದು ಆಯನೂರು ಸಮೀಪದ ಹಾರೋಹಿತ್ತಲು ಗ್ರಾಮದ ಗುರುಮೂರ್ತಿ(35) ಕತೆ.
ನೂರಾರು ಕನಸು ಹೊತ್ತು ಬೈಕ್‌ನಲ್ಲಿ ತನ್ನೂರಿಗೆ ಮರಳುತ್ತಿದ್ದ ಗುರುಮೂರ್ತಿ ಆಯನೂರು ಸಮೀಪದ ಚಿನ್ನಮನೆ ಗ್ರಾಮದಲ್ಲಿ ಮಂಗಳವಾರ ಖಾಸಗಿ ಬಸ್ ನಡುವೆ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಪಘಾತದ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿರುವುದು. ಗುರುಮೂರ್ತಿ ತಲೆಗೆ ತೀವ್ರ ಪೆಟ್ಟು ಬಿದ್ದು ಅಧಿಕ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಗುರುಮೂರ್ತಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಸಹೋದರಿಯರು ಇದ್ದಾರೆ. ಸ್ವಂತ ಜಮೀನು ಇಲ್ಲದ ಕಾರಣ ಕೂಲಿ ಕೆಲಸ ಮಾಡುತ್ತಿದ್ದ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲದಲ್ಲಿ ಬಟ್ಟೆ ವ್ಯಾಪಾರ ಮಾಡಲು ನಿರ್ಧರಿಸಿದ್ದ ಗುರುಮೂರ್ತಿ, ಬಟ್ಟೆ ಖರೀದಿಗೆಂದು ಆಯನೂರಿಗೆ ಹೋಗಿ ವಾಪಸ್ ಬರುತ್ತಿದ್ದ ಎನ್ನಲಾಗಿದೆ.