ಶೃಂಗೇರಿ: ಗ್ರಾಮೀಣ ಭಾಗದ ಸಹಕಾರ ಸಂಘಗಳು ಅತಿ ಹೆಚ್ಚು ವ್ಯಾಪಾರ, ವಹಿವಾಟು ನಡೆಸುತ್ತಿದ್ದು ತಾಲೂಕು ಕೇಂದ್ರದಲ್ಲಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚಟುವಟಿಕೆ ಕುಂಠಿತಗೊಂಡಿದೆ ಎಂದು ಸಂಘದ ಸದಸ್ಯ ಶಂಕರಪ್ಪ ಆಕ್ಷೇಪಿಸಿದರು.
ಪಟ್ಟಣದ ಹೊರವಲಯದ ಶಂಕರಪುರದ ಕೆಸಗೋಡು ಶಿಂಗಪ್ಪನಾಯ್ಕ ಟಿಎಪಿಸಿಎಂಎಸ್ ರೈತ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿರುವ ಸಂಘದ ಕಟ್ಟಡದಲ್ಲಿ ರೈತರಿಗೆ ಅಗತ್ಯವಾಗಿರುವ ರಸ ಗೊಬ್ಬರ ಮಾರಾಟ ಸಮರ್ಪಕವಾಗಿಲ್ಲ ಎಂದು ದೂರಿದರು.
ಷೇರುದಾರ ಮಂಜುನಾಥ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂಘದ ಸಭಾಭವನ ನಿರ್ವಹಣೆ ಕಳಪೆಯಾಗಿದೆ. ವಿವಾಹ ಕಾರ್ಯಕ್ರಮದಲ್ಲಿ ಸಾಕಷ್ಟು ಗೊಂದಲ ಉಂಟಾಗಿದ್ದು ಸಭಾಗೃಹದ ಉಸ್ತುವಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಷೇರುದಾರ ನಂದೀಶ್ ಮಾತನಾಡಿ, ಸಂಘದ ಒಟ್ಟು ನಿವೇಶನದ ಜಾಗ ಒತ್ತುವರಿಯಾಗಿದೆಯೆ ಎಂದು ಪರಿಶೀಲಿಸಬೇಕಿದ್ದು ಒತ್ತುವರಿಯಾಗಿದ್ದರೆ ಅದನ್ನು ಸಂಘಕ್ಕೆ ವಶ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಸಂಘದ ಅಧ್ಯಕ್ಷ ಕೆ.ಎಸ್.ರಮೇಶ್ ಮಾತನಾಡಿ, ಆಯಾ ಗ್ರಾಮ ಪ್ರದೇಶದಲ್ಲಿರುವ ಪಿಎಸಿಎಸ್ ಮೂಲಕ ರೈತರಿಗೆ ಸಾಲದ ರೂಪದಲ್ಲಿಯೂ ರಸಗೊಬ್ಬರ ನೀಡುತ್ತಿರುವುದರಿಂದ ನಮ್ಮ ಸಂಘದ ವ್ಯಾಪಾರ, ವ್ಯವಹಾರದಲ್ಲಿ ತೊಡಕು ಉಂಟಾಗಿದೆ. ಮುಂದಿನ ದಿನದಲ್ಲಿ ವ್ಯಾಪಾರ ಅಭಿವೃದ್ಧಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಷೇರು ಮೊತ್ತವನ್ನು 1000 ರೂ. ನಿಗದಿ ಮಾಡಿದ್ದು ಸದಸ್ಯರು ಕಡಿಮೆ ಇರುವ ಹಣವನ್ನು ಭರ್ತಿ ಮಾಡಬೇಕು ಎಂದು ಮನವಿ ಮಾಡಿದರು.
ಉಪಾಧ್ಯಕ್ಷ ಚೇತನ್ ಹೆಗ್ಡೆ, ನಿರ್ದೇಶಕರಾದ ಎಚ್.ಕೆ.ನವೀನ್, ಕೆ.ಆರ್.ವೆಂಕಟೇಶ್, ನಟರಾಜ್, ರವೀಂದ್ರ ಹೆಗ್ಡೆ, ರಾಮಸ್ವಾಮಿ, ಪ್ರಕಾಶ್, ಸುಭಾಷ್, ಮಹೇಶ್, ವೇದಾವತಿ, ಅನ್ನಪೂರ್ಣ, ಅರುಣ, ಸುರೇಶ್, ಸಿಇಒ ಶಂಕರಪ್ಪ ಇತರರಿದ್ದರು. 1ಎಸ್.ಆರ್.ಐ 4;-ಶೃಂಗೇರಿ ರೈತ ಭವನದಲ್ಲಿ ಟಿಎಪಿಸಿಎಂಎಸ್ ಸರ್ವ ಸದಸ್ಯರ ಸಭೆ ನಡೆಯಿತು. ಕೆ.ಎಸ್.ರಮೇಶ್, ಶಂಕರಪ್ಪ, ಕಚ್ಚೋಡಿ ಶ್ರೀನಿವಾಸ್, ಅರುಣ, ಸುರೇಶ್ ಇದ್ದರು.