ಸುರಪುರ: ನೀರಾವರಿ ಜಿಲ್ಲೆಯಾಗಿರುವ ಯಾದಗಿರಿಗೆ ಯೂರಿಯಾ ಸೇರಿದಂತೆ ಇನ್ನಿತರ ರಸಗೊಬ್ಬರ ಸಾಕಷ್ಟು ಕಳುಹಿಸಿದ್ದರೂ,ಅಭಾವ ಸೃಷ್ಟಿಯಾಗಿದ್ದು ನೋಡಿದಾಗ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವಂತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜುಗೌಡ ಆರೋಪಿಸಿದರು.
ರಾಜ್ಯಕ್ಕೆ ೬.೩೦ ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಅವಶ್ಯಕವಿದ್ದು, ಕೇಂದ್ರ ಸರ್ಕಾರ ೮.೭೩ ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಕಳುಹಿಸಿದೆ.ಅವಶ್ಯಕತೆಗಿಂತ ೨.೪೩ ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಹೆಚ್ಚಿಗೆ ನೀಡಿದರೂ ಯಾಕೆ ಕೊರತೆಯಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ಕೃಷಿ ಸಚಿವರು ಗಮನ ಹರಿಸುತ್ತಿಲ್ಲ.ಇಲಾಖೆ ಸಂಪೂರ್ಣ ನಿಷ್ಕಿö್ರÃಯಗೊಂಡಿದೆ ಎಂದು ಕಿಡಿಕಾರಿದರು.
ಯಾದಗಿರಿ ಸೇರಿ ಎಲ್ಲ ಜಿಲ್ಲೆಗಳಲ್ಲಿ ರಸಗೊಬ್ಬರ ಕೊರತೆ ಉಂಟಾಗಿ ರೈತರು ಪರದಾಡುತ್ತಿದ್ದಾರೆ. ಕೇಂದ್ರ ಕೊಟ್ಟ ಗೊಬ್ಬರ ಸರಿಯಾಗಿ ವಿತರಿಸುತ್ತಿಲ್ಲ. ಬದಲಿಗೆ ಕಾಳ ಸಂತೆಗೆ ಹೋಗುತ್ತಿದೆ. ಇನ್ನೂ ಬೀಜದ ಬೆಲೆ ಶೇ.೨೦ ರಷ್ಟು ಹೆಚ್ಚಿಸಿದೆ, ಬರ ಪರಿಹಾರ ಕೊಡಲಿಲ್ಲ. ಇನ್ನೊಂದೆಡೆ ರೈತರನ್ನು ನಿರಂತರವಾಗಿ ಶೋಷಣೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ರೈತ ವಿರೋಧಿ ಸರ್ಕಾರ ಎಂದು ಜರಿದರು.
ಕಳೆದ ೨ ವರ್ಷಗಳಲ್ಲಿ ೩೪೦೦ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭೂ ಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ನೀಡುವ ಪ್ರೋತ್ಸಾಹ ಧನ ನಿಲ್ಲಿಸಲಾಗಿದೆ ಎಂದು ರಾಜುಗೌಡ ಟೀಕಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ದುರ್ಗಪ್ಪ ಆಲ್ದಾಳ, ಸುರಪುರ ಮಂಡಲ ಅಧ್ಯಕ್ಷ ವೇಣು ಮಾಧವ ನಾಯಕ, ಪ್ರಮುಖರಾದ ರಾಜಾ ಹನುಮಪ್ಪ ನಾಯಕ, ಎಚ್.ಸಿ.ಪಾಟೀಲ್, ಬಸವರಾಜ ಅನ್ಸೂರ್ ಇತರರಿದ್ದರು.